ಸಾರಾಂಶ
ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ನೆಹರು ಯುವ ಕೇಂದ್ರ ಉಡುಪಿ, ಡಾ. ಬಿ. ಆರ್ ಅಂಬೇಡ್ಕರ್ ಯುವಕ ಮಂಡಲ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯಲ್ಲಿ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ನೆರವೇರಿತು.
ಕನ್ನಡಪ್ರಭ ವಾರ್ತೆ ಗಂಗೊಳ್ಳಿ
ಅಂಬೇಡ್ಕರ್ ಅವರ ಬದುಕು ಹೋರಾಟ ಮತ್ತು ಸಾಧನೆ ಜಗತ್ತಿನ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತಗದ್ದು, ಈ ನಿಟ್ಟಿನಲ್ಲಿ ಅವರ ಬದುಕನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಲೇಖಕ ಮತ್ತು ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಅಭಿಪ್ರಾಯ ಪಟ್ಟಿದ್ದಾರೆ.ಅವರು ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ನೆಹರು ಯುವ ಕೇಂದ್ರ ಉಡುಪಿ, ಡಾ. ಬಿ. ಆರ್ ಅಂಬೇಡ್ಕರ್ ಯುವಕ ಮಂಡಲ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಮೇಲ್ ಗಂಗೊಳ್ಳಿಯಲ್ಲಿ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಸಂವಿಧಾನ ರಚನೆ ಮತ್ತು ದಲಿತೋದ್ಧಾರದ ಆಚೆಗೂ ಅಂಬೇಡ್ಕರ್ ಜೀವನದ ಸಾಧನೆಗಳು ಬಹಳಷ್ಟು ಇವೆ. ಅವರ ರಾಷ್ಟ್ರೀಯ ಚಿಂತನೆಗಳು ಮಾನವತಾವಾದ, ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳನ್ನು, ಬಹುಮುಖಿ ಕೆಲಸಗಳನ್ನು ವಿವರವಾಗಿ ಪರಿಚಯಿಸುವ ಕೆಲಸ ಹೆಚ್ಚು ಆಗಬೇಕಿದೆ ಎಂದು ಅವರು ಹೇಳಿದರು.ಶ್ರೀ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಜಯಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ. ಸದಸ್ಯೆ ಶ್ರೀಮತಿ ಅಕ್ಕಮ್ಮ ಅಧ್ಯಕ್ಷತೆ ವಹಿಸಿದ್ದರು. ಮೇಲ್ ಗಂಗೊಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗುರುರಾಜ್ ಆಚಾರ್ಯ ಶುಭ ಹಾರೈಸಿದರು. ಯುವಕ ಮಂಡಲದ ಅಧ್ಯಕ್ಷ ನಾಗೇಶ್, ಮಹಿಳಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು. ಅಮೃತ ಯುವತಿ ಮಂಡಲದ ಅಧ್ಯಕ್ಷೆ ಸಹನಾ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಯುವಕಮಂಡಲದ ಗೌರವಾಧ್ಯಕ್ಷ ಭಾಸ್ಕರ ಎಚ್. ಜಿ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.