ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಅವರ ಮಾದರಿ ಜೀವನವೇ ನಮಗೆಲ್ಲಾ ಸ್ಫೂರ್ತಿದಾಯಕವಾಗಲಿ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಹಳಿಯಾಳಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಕೊಡುಗೆ ಅವರ ಮಾದರಿ ಜೀವನವೇ ನಮಗೆಲ್ಲಾ ಸ್ಫೂರ್ತಿದಾಯಕವಾಗಲಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಭಾನುವಾರ ಪಟ್ಟಣದ ಯಲ್ಲಾಪುರ ನಾಕೆಯ ಬಳಿಯಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಬಳಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.ತಮ್ಮ ಜೀವನದುದ್ದಕ್ಕೂ ತಾರತಮ್ಯ, ಜಾತಿವ್ಯವಸ್ಥೆಯ ವಿರುದ್ಧ ಅವರು ನಡೆಸಿದ ಹೋರಾಟ, ಸಮಾನ ಹಕ್ಕುಗಳು ಮತ್ತು ಅವಕಾಶಗಳು ದೊರೆಯಬೇಕೆಂಬ ಅವರ ಸಂಕಲ್ಪ, ಬದುಕು ನಮಗೆ ಆದರ್ಶವಾಗಬೇಕೆಂದರು. ಬಾಬಾಸಾಹೇಬರ ಆದರ್ಶಗಳು ಸರ್ವರಿಗೂ ಪ್ರೇರಣೆಯಾಗಬೇಕು. ಪಟ್ಟಣದ ಸೌಂದರ್ಯವರ್ಧನೆಗೂ ಸಹಕಾರಿಯಾಗುವ ದಿಸೆಯಿಂದ ಈ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಈ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಲ್ಲಿ ನಡೆಯುವಂತೆ ಹಾಗೂ ತಮ್ಮ ಮನೆಯ ಸ್ವಂತ ಕೆಲಸದಂತೆ ಆಗಬೇಕೆಂಬ ಕಾಳಜಿಯನ್ನು ಪ್ರತಿಯೊಬ್ಬರು ವಹಿಸಬೇಕೆಂದರು.ಯಾವ ಕಾಮಗಾರಿ:
ಪ್ರಸ್ತುತ ಸಮುದಾಯ ಬಳಿ ಭವನದ ಬಳಿಯಿರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸ್ಥಳದಲ್ಲಿಯೇ ನಿಂತ ಭಂಗಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ 10 ಅಡಿ ಎತ್ತರದ ಪುತ್ಥಳಿಯ ಪ್ರತಿಷ್ಠಾಪನೆ ಹಾಗೂ ಈ ಭಾಗದ ನವೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್.ಎಲ್. ಘೋಟ್ನೇಕರ ಹಾಗೂ ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಡಾ. ಬಿ.ಆರ್. ಅಂಬೇಡ್ಕರ ಸೇವಾ ಸಮಿತಿಯ ಪ್ರಮುಖರಾದ ಮಾರುತಿ ಕಲಬಾವಿ, ವಿಲಾಸ ಕಣಗಲಿ, ಹನುಮಂತ ಚಲವಾದಿ, ಮಹಾದೇವ ಮಾದರ, ಕುಮಾರ ಕಲಬಾವಿ ಹಾಗೂ ಸಮಾಜದ ಪ್ರಮುಖರು ಮತ್ತು ಇತರರಿದ್ದರು.