ತೆರೆದ ವಾಹನದಲ್ಲಿ ಅಂಬೇಡ್ಕರ್‌ ಚಿತ್ರ ಮೆರವಣಿಗೆ

| Published : Apr 15 2025, 12:45 AM IST

ಸಾರಾಂಶ

ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಹನೂರು ತಾಲೂಕು ಆಡಳಿತದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಹನೂರು ತಾಲೂಕು ಆಡಳಿತದಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಹನೂರು ಪಟ್ಟಣದ ಆರ್‌ಎಂಸಿ ಆವರಣದಲ್ಲಿ ವಿಶೇಷವಾಗಿ ಅಲಂಕರಿಸಲಾದ ತೆರೆದ ವಾಹನದ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಿ, ಪುಷ್ಪಾರ್ಚನೆ ಮಾಡಿ ನಂತರ ಶಾಸಕ ಎಂ.ಆರ್.ಮಂಜುನಾಥ್ ಮೆರವಣಿಗೆಗೆ ಚಾಲನೆ ನೀಡಿದರು. ಈ ಮೆರವಣಿಗೆಯ ಮಾರ್ಗದುದ್ದಕ್ಕೂ ಒಡೆಯರಪಾಳ್ಯದ ಟಿಬೇಟಿಯನ್ ಕಾಲೋನಿಯ ಕಲಾತಂಡದ ವಿದ್ಯಾರ್ಥಿಗಳು ಭಾಗವಹಿಸಿ ಹೆಜ್ಜೆ ಹಾಕಿದರು. ವಾದ್ಯಗೊಷ್ಟಿ ತಮಟೆ, ನಾದಕ್ಕೆ ಯುವಕರು ಹಾಗೂ ಸಾರ್ವಜನಿಕರು ಜತೆಯಾದರು. ಈ ಮೆರವಣಿಗೆಯೂ ಮಲೆಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯ ಮೂಲಕ ಸಾಗಿದ ನಂತರ, ಖಾಸಗಿ ಬಸ್ ನಿಲ್ದಾಣದ ಮುಖೇನ ಚಲಿಸಿ, ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂತ್ಯವಾಯಿತು.

ಬಳಿಕ ಆಯೋಜನೆ ಮಾಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ, ಡಾ.ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಜನತೆಯ ಜೀವನಾಡಿ ಇದ್ದಂತೆ. ಅವರ ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಗಮವಾಗಿರುವುದು. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಪ್ರತಿಯೊಬ್ಬರಿಗೂ ದಾರಿದೀಪ. ಆದ್ದರಿಂದ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅನುಸರಿಸಿಕೊಳ್ಳುವಂತೆ ತಿಳಿಸಿದರು.ಬಳಿಕ ಮುಖ್ಯಭಾಷಾಣಕಾರರಾಗಿ ಆಗಮಿಸಿದ್ದ ಚಾಮರಾಜನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಮಾತನಾಡಿ, ಹಿಂಸೆ, ಕಳ್ಳತನ ಮಾಡದಿರುವುದು, ಸುಳ್ಳು ಹೇಳದೇ ಇರುವುದು. ಮದ್ಯಪಾನ ಮಾಡದಿರುವುದು. ಶೀಲ ಕಾಪಾಡಿಕೊಳ್ಳುವುದು ಎಂಬ ಐದು ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಯಲ್ಲಿ ತಂದರೆ ಖಂಡಿತವಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಎಂದರು.ಇದೇ ಸಂದರ್ಭದಲ್ಲಿ ಬೌದ್ಧ ಬಿಕ್ಕು ಭಂತೇಜಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮ್ತಾಜ್ ಬಾನು, ಪಪಂ ಸದಸ್ಯರಾದ ಮಂಜುಳಾ, ಮಹೇಶ್ ನಾಯಕ, ಸುದೇಶ್, ಬಸವರಾಜು, ಮಾದೇಶ್ ಲತಾ, ತಹಸೀಲ್ದಾ‌ರ್ ಗುರುಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಡಿವೈಎಸ್ಪಿ ಡಿವೈಎಸ್ಪಿ ಎಚ್.ಕೆ ಮಹಾನಂದ, ಆರಕ್ಷಕ ನಿರೀಕ್ಷಕ ಆನಂದ್ ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.