ಅಂಬೇಡ್ಕರ್ ತತ್ತ್ವ ಸಿದ್ಧಾಂತಗಳು ಹರಿಕಥೆಯಾಗದಿರಲಿ: ಶ್ರೀನಿವಾಸ್

| Published : Jun 24 2024, 01:39 AM IST

ಅಂಬೇಡ್ಕರ್ ತತ್ತ್ವ ಸಿದ್ಧಾಂತಗಳು ಹರಿಕಥೆಯಾಗದಿರಲಿ: ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಅಂಬೇಡ್ಕರ್ ಬದುಕಿನುದ್ದಕ್ಕೂ ಹೋರಾಟ ನಡೆಸಿದರು. ಅವರ ತತ್ತ್ವ ಸಿದ್ಧಾಂತಗಳು ಹರಿಕಥೆಯಾಗಬಾರದು. ಜೀವನದ ಅವಿಭಾಜ್ಯ ಅಂಗವಾಗಿ ಸಮಾಜದಲ್ಲಿ ಬದಲಾವಣೆ ಮೂಡಿಸುವ ಸಾಧನವಾಗಬೇಕು ಎಂದು ಸಹ ಪ್ರಾಧ್ಯಾಪಕ ಪ್ರೊ. ಜಿ.ಶ್ರೀನಿವಾಸ್ ಹೇಳಿದರು.

ಮತ್ತಾವರ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಕುರಿತ ಅಧ್ಯಾಯನ ಶಿಬಿರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಂಬೇಡ್ಕರ್ ಬದುಕಿನುದ್ದಕ್ಕೂ ಹೋರಾಟ ನಡೆಸಿದರು. ಅವರ ತತ್ತ್ವ ಸಿದ್ಧಾಂತಗಳು ಹರಿಕಥೆಯಾಗಬಾರದು. ಜೀವನದ ಅವಿಭಾಜ್ಯ ಅಂಗವಾಗಿ ಸಮಾಜದಲ್ಲಿ ಬದಲಾವಣೆ ಮೂಡಿಸುವ ಸಾಧನವಾಗಬೇಕು ಎಂದು ಸಹ ಪ್ರಾಧ್ಯಾಪಕ ಪ್ರೊ. ಜಿ.ಶ್ರೀನಿವಾಸ್ ಹೇಳಿದರು.ತಾಲೂಕಿನ ಮತ್ತಾವರ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭೀಮ್ ಆರ್ಮಿ ಸಂಘಟನೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಕುರಿತ ಅಧ್ಯಯನ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರದ ದೀನ ದಲಿತರು, ಬಡವರು ಹಾಗೂ ಹಿಂದುಳಿದ ವರ್ಗದವರಿಗೆ ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರಿದವರು ಅಂಬೇಡ್ಕರ್. ಕುಟುಂಬವನ್ನು ತ್ಯಜಿಸಿ ಸರ್ವರಿಗೂ ಸಮಾನತೆ, ಹಕ್ಕು, ಸ್ವಾತಂತ್ರ್ಯ ಹಾಗೂ ಮಂದಿರಗಳಿಗೆ ಮುಕ್ತವಾಗಿ ತೆರಳಲು ಸಂವಿಧಾನದ ಮೂಲಕ ಅವಕಾಶ ಕಲ್ಪಿಸಿ ಬದುಕನ್ನು ಜನಾಂಗಕ್ಕೆ ಮುಡಿಪಿಟ್ಟವರು ಎಂದರು.ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಪ್ರಜಾಪ್ರಭುತ್ವವನ್ನು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರದ ಪ್ರತಿ ಜನ ಸಾಮಾನ್ಯರಿಗೂ ಮತದಾನದ ಹಕ್ಕು, ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಗೆ ಹೋರಾಡಿದ ನಾಯಕ. ಅಲ್ಲದೇ ಸಾಮಾಜಿಕ ಬಹಿಷ್ಕಾರ ನಿಷೇಧಿಸಿ ನಾವೆಲ್ಲರೂ ಭಾರತೀಯರ ಎಂಬ ಆಲೋಚನೆ ಬಿತ್ತಿದ ಮಹಾಪುರುಷ ಎಂದು ತಿಳಿಸಿದರು.ಅಂಬೇಡ್ಕರ್‌ ದೇಶದ ಜನತೆಗೆ ಸುಸ್ಥಿರ ಬದುಕನ್ನು ರೂಪಿಸುವ ಕನಸು ಹೊತ್ತಿದ್ದರು. ಅನೇಕ ಅವಮಾನ, ಮುಜುಗರ, ಅಸ್ಪೃಶ್ಯತೆ, ಶೋಷಣೆ ನಡುವೆ ಉನ್ನತ ವಿದ್ಯಾಭ್ಯಾಸ ಪೂರೈಸಿ ಜನಾಂಗದ ಏಳಿಗೆಗೆ ಶ್ರಮಿಸಿದವರ ಆದರ್ಶ, ಸಂದೇಶ ಗಳನ್ನು ಇಂದಿನ ಯುವಪೀಳಿಗೆ ಕೇವಲ ಜಯಂತಿಗಳಲ್ಲಿ ನೃತ್ಯಕ್ಕೆ ಸೀಮಿತಗೊಳಿಸದೇ ಪಸರಿಸುವ ಕಾರ್ಯ ಮಾಡ ಬೇಕಿದೆ ಎಂದರು.ಹಿಂದಿನ ಕಾಲಘಟ್ಟದಲ್ಲಿ ವೃತ್ತಿಗನುಸಾರ ಅವರವರ ಜಾತಿ ಸೃಷ್ಟಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪಾಲಕರ ಕೆಲಸವನ್ನು ಮಕ್ಕಳು ಮಾಡಲೇಬೇಕೆಂಬ ಒತ್ತಾಸೆಯೆನಿಲ್ಲ. ಸಮಾಜದ ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದಕ್ಕೆ ಅಡಿಪಾಯ ಹಾಕಿದವರೇ ಡಾ. ಬಿ.ಆರ್.ಅಂಬೇಡ್ಕರ್‌ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಭೀಮ್ ಆರ್ಮಿ ಜಿಲ್ಲಾ ಗೌರವಾಧ್ಯಕ್ಷ ಹೊನ್ನೇಶ್ ಮಾತನಾಡಿ, ಗ್ರಾಮದ ಯುವಕರು, ಮಹಿಳೆಯರು ಹಾಗೂ ಜನಾಂಗದ ಸಾಮಾಜಿಕ ಹಕ್ಕುಗಳ ಬಗ್ಗೆ ಸಮಗ್ರ ಅರಿವು ಮೂಡಿಸುವ ಸಲುವಾಗಿ ಸುಮಾರು 15 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂಭೇಡ್ಕರ್ ಅಧ್ಯಯನ ಶಿಬಿರ ಏರ್ಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಜಯಂತಿಗಳಲ್ಲಿ ಸಮಾನತೆ ಜಾಗೃತಿ ಮೂಡಿಸಲಾಗುತ್ತಿದೆ. ಇಂದಿನ ಕಾಲಘಟ್ಟದಲ್ಲಿ ದಲಿತರನ್ನು ಕೇವಲ ಮತ ಬ್ಯಾಂಕ್‌ಗಳಾಗಿ ಬಳಸಿಕೊಂಡು ಸವಲತ್ತು ಒದಗಿಸದೇ ನಾಟಕವಾಡುತ್ತಿರುವ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಸಲುವಾಗಿ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಇಂದಿಗೂ ದಲಿತರು ಹಾಗೂ ಹಿಂದುಳಿದವರಿಗೆ ಹಲವಾರು ಮಂದಿಗೆ ಭೂಮಿ, ನಿವೇಶನವಿಲ್ಲದೇ ಪರಿತಪಿಸು ವಂತಾಗಿದೆ. ಜೀವನ ಸುಧಾರಣೆಗೆ ಕೇವಲ ಒಂದೆರಡು ಎಕರೆ ಒತ್ತುವರಿ ಜಾಗ ತೆರವುಗೊಳಿಸುವ ಸರ್ಕಾರ, ಬಲಾಢ್ಯರ ನೂರಾರು ಎಕರೆ ಪ್ರದೇಶವನ್ನು ಒಪ್ಪಂದದ ಮೇರೆಗೆ ನೀಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ರಮೇಶ್, ಯುವಘಟಕದ ಅಧ್ಯಕ್ಷ ಪ್ರವೀಣ್, ಸದಸ್ಯರಾದ ಹುಣಸೇಮಕ್ಕಿ ಲಕ್ಷ್ಮಣ್, ಸುಧೀರ್, ಕುಮಾರ್, ಅಂಬಳೆ ಗ್ರಾ.ಪಂ. ಉಪಾಧ್ಯಕ್ಷೆ ಮೀನಾಕ್ಷಿ, ಗ್ರಾಮದ ಹಿರಿಯ ಮುಖಂಡ ಸಗನಯ್ಯ, ಮುಖಂಡರಾದ ಮಧು, ಪ್ರಕಾಶ್, ಚಿದಾನಂದ್, ಚಂದ್ರಣ್ಣ ಉಪಸ್ಥಿತರಿದ್ದರು.23 ಕೆಸಿಕೆಎಂ 2

ಚಿಕ್ಕಮಗಳೂರು ತಾಲೂಕಿನ ಮತ್ತಾವರ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭೀಮ್ ಆರ್ಮಿ ಸಂಘಟನೆ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಕುರಿತ ಅಧ್ಯಯನ ಶಿಬಿರವನ್ನು ಹೊನ್ನೇಶ್‌ ಉದ್ಘಾಟಿಸಿದರು. ಪ್ರೊ. ಜಿ. ಶ್ರೀನಿವಾಸ್‌, ರಮೇಶ್‌, ಹುಣಸೇಮಕ್ಕಿ ಲಕ್ಷ್ಮಣ್‌, ಮೀನಾಕ್ಷಿ ಇದ್ದರು.