ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ದೇಶದ ಎಲ್ಲ ವರ್ಗಗಳ ಜನರು ಒಗ್ಗೂಡಿ ಸೋದರತ್ವ ಭಾವನೆಯಿಂದ ಬದುಕಬೇಕೆನ್ನುವುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ, ಪ್ರಸ್ತುತ ಅದು ಸಾಧ್ಯವಾಗುತ್ತಿದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಹಸೀಲ್ದಾರ್ ಜಿ.ಆದರ್ಶ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀಸೌಮ್ಯಕೇಶವ ಸ್ವಾಮಿ ದೇವಸ್ಥಾನದ ಮುಂಭಾಗ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಭಾನುವಾರ ನಡೆದ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಹಿಂದುಳಿದ ಬಡವರು, ತುಳಿತಕ್ಕೊಳಗಾದವರು ಹಾಗೂ ಶೋಷಣೆಗೊಳಪಟ್ಟ ಅಸಹಾಯಕರನ್ನುರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಮೇಲೆತ್ತಲು ಶಾಸನ ಹಾಗೂ ಯೋಜನೆ ರೂಪಿಸಿ, ಅವುಗಳನ್ನು ಜಾರಿಗೊಳಿಸುವ ಮೂಲಕ ಸಮಾಜದಲ್ಲಿ ಅಸಮಾನತೆ ಹೋಗಲಾಡಿಸುವುದು ನಮ್ಮ ಸಂವಿಧಾನದ ಪ್ರಸ್ತಾವನೆಯ ಮುಖ್ಯ ಆಶಯವಾಗಿದೆ ಎಂದರು.ನವ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸರ್ವಜನಾಂಗದ ಶಾಂತಿಯ ತೋಟದಂತೆ ಕಂಗೊಳಿಸುತ್ತಿರುವ ಲಕ್ಕುಂಡಿಯ ಶಿಲ್ಪಕಲೆ ಸ್ತಬ್ಧ ಚಿತ್ರವು ನಮ್ಮರಾಜ್ಯದ ಹಿರಿಮೆಗರಿಮೆ ಸರ್ವಧರ್ಮ ಸಮನ್ವಯ ಶಾಂತಿ ಸಹಬಾಳ್ವೆಯನ್ನು ಪ್ರತಿಪಾದಿಸಿದೆ ಎಂದರು.
ಮಂಡ್ಯ ಜಿಲ್ಲೆಯ ಎನ್‌ಎಸ್‌ಎಸ್ ವಿದ್ಯಾರ್ಥಿನಿಯೊಬ್ಬರು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಮೂಲಕ ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಹೆಚ್ಚು ಮಾಡಿರುವುದು ಗಣತಂತ್ರದ ಪ್ರತಿಫಲ ಎನಿಸುತ್ತದೆ ಎಂದರು.ಗಣರಾಜ್ಯೋತ್ಸವದ ಮಹತ್ವ ಕುರಿತು ವಕೀಲ ಜೆ.ಕೆ.ರಮೇಶ್‌ಗೌಡ ಪ್ರಧಾನ ಭಾಷಣ ಮಾಡಿದರು. ಸಮಾರಂಭದ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಪತ್ರಿಕೋದ್ಯಮ ಕ್ಷೇತ್ರದಿಂದ ದೇವಲಾಪುರ ಜಗದೀಶ್, ಕೃಷಿ ಕ್ಷೇತ್ರದಿಂದ ಬಿ.ಎಚ್.ಸುರೇಶ್, ತೋಟಗಾರಿಕೆ ಕ್ಷೇತ್ರದಿಂದ ಮಲ್ಲಿಕಾರ್ಜುನ್, ಜಾನಪದ ಕ್ಷೇತ್ರದಿಂದ ಡಿ.ಕೆ.ಅನಂತಕುಮಾರ್ ಹಾಗೂ ರಂಗಭೂಮಿ ಕಲಾವಿದ ಲಕ್ಷ್ಮಣ್‌ಗೌಡ ಅವರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.ಕಳೆದ ಸಾಲಿನಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಪಟ್ಟಣದ ಶ್ರೀಕುವೆಂಪು ಸ್ಮಾರಕ ಶಾಲೆ ವಿದ್ಯಾರ್ಥಿ ಎಂ.ಪೃಥ್ವಿಗೌಡ, ಕುಸ್ತಿ ಸೇರಿದಂತೆ ವಿವಿಧ ಪಂದ್ಯಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ತಾಲೂಕಿನ ಜಿ.ಎಂ.ಧನುಶ್ರೀ, ಎಂ.ಅರ್ಜುನ್, ಎಚ್.ಎನ್.ಸಾಗರ್, ಎಚ್.ಎಸ್.ಗಿರೀಶ್‌ಗೌಡ, ಗೌತಮ್ ಗೌಡ, ಪ್ರೀತಮ್ ಗೌಡ, ಡಿ.ಎಚ್.ಸಾಗರ್, ಎಚ್.ಕೆ.ಶಶಾಂಕ್ ಗೌಡ, ಅನಂತ ಭುವನ್, ಡಿ.ಹರ್ಷನ್ ಮತ್ತು ಉಲ್ಲಾಸ್ ಅವರಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಲಿ ಅನ್ಸರ್‌ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಬೆಳ್ಳೂರು ಪಪಂ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಮಹಮ್ಮದ್ ಯಾಸಿನ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ತಾಪಂ ಇಒ ಬಿ.ಎಸ್.ಸತೀಶ್, ಸಿಪಿಐ ನಿರಂಜನ್, ಎಆರ್‌ಟಿಒ ಮಲ್ಲಿಕಾರ್ಜುನ್, ಎಡಿಎಲ್‌ಆರ್ ಪ್ರಮೋದ್, ಬಿಇಒ ಕೆ.ಯೋಗೇಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರತ್, ಪಿಎಸ್‌ಐ ಶಿವಕುಮಾರ್, ಮುಖಂಡರಾದ ಎಂ.ನಾಗರಾಜಯ್ಯ, ಆರ್.ಕೃಷ್ಣೇಗೌಡ ಸೇರಿದಂತೆ ಹಲವರು ಇದ್ದರು.