ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆಯರು ಇಂದೇನಾದರೂ ವಿದ್ಯಾವಂತರಾಗಿ ಅವರಿಗೆ ದುಡಿಯುವ ಶಕ್ತಿ ಬಂದಿದ್ದರೆ ಅದಕ್ಕೆ ಅಂಬೇಡ್ಕರ್, ಸಾವಿತ್ರಿ ಬಾಯಿಫುಲೆ ಕಾರಣ ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ಗ್ರಂಥಪಾಲಕಿ ಪ್ರಮೀಳಾ ತಿಳಿಸಿದರು.ತಾಲೂಕಿನ ತುಂಬಕೆರೆ ಗ್ರಾಮದ ನಿರಾಶ್ರಿತರ ಕಾಲೋನಿಯಲ್ಲಿ ಮಾರ್ಗದರ್ಶಿ ಟ್ರಸ್ಟ್ ಆಶ್ರಯದಲ್ಲಿ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದು ಅಂಬೇಡ್ಕರ್ ವಿದ್ಯೆ, ಮೀಸಲಾತಿ ನೀಡದಿದ್ದರೆ ನನ್ನಂತಹ ಮಹಿಳೆಯರು ನಾಲ್ಕು ಗೋಡೆ ಮಧ್ಯದಲ್ಲಿರಬೇಕಾಗುತ್ತಿತ್ತು ಎಂದು ನುಡಿದರು.
ಪತ್ರಕರ್ತ ದ.ಕೋ. ಹಳ್ಳಿ ಚಂದ್ರಶೇಖರ್ ಮಾತನಾಡಿ, ಮಹಿಳೆ ದೈಹಿಕವಾಗಿ ಪುರುಷರಿಗಿಂತ ದುರ್ಬಲರಾಗಿರಬಹುದು, ಆದರೆ ಮಾನಸಿಕವಾಗಿ ಆಕೆ ಪುರುಷರಿಗಿಂತ ಪ್ರಬಲಳಾಗಿದ್ದಾಳೆ. ಆದ್ದರಿಂದಲೇ ಆಕೆಗೆ ಕುಟುಂಬ ನಿಭಾಯಿಸುವ ಜೊತೆಗೆ ದೇಶವನ್ನೂ ಆಳುವ ಶಕ್ತಿ ಬಂದಿದೆ. ನಿರಾಶ್ರಿತ ಮಕ್ಕಳಿಗೆ ಆತ್ಮಬಲ ತುಂಬುವ ಕಾರ್ಯಕ್ರಮ ಇದಾಗಿದ್ದು, ನಿರಾಶ್ರಿತರು ಎಲ್ಲರಂತೆ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುನ್ನೆಲೆಗೆ ತರಬೇಕು ಎಂದು ಹೇಳಿದರು.ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಮಾತನಾಡಿ, ಇಲ್ಲಿನ ನಿರಾಶ್ರಿತರು ಮೂಲ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ, ಜಿಲ್ಲಾಡಳಿತ ಇತ್ತ ಗಮನಹರಿಸಿ ಇವರಿಗೆ ಸವಲತ್ತು ದೊರಕಿಸಿಕೊಡುವ ಔದಾರ್ಯತೆ ತೋರಬೇಕು ಎಂದರು.
ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಿ.ದೇವರಾಜ ಕೊಪ್ಪ ಮಾತನಾಡಿ, ಭೂಮಿ ಮತ್ತು ಹೆಣ್ಣಿಗೆ ಸೃಷ್ಟಿಸುವ ಶಕ್ತಿಯಿದೆ, ಜಗತ್ತಿನ ಯಾವುದೇ ವಸ್ತು ಸೃಷ್ಟಿಯ ಹೊರತಾಗಿಲ್ಲ, ಆದ್ದರಿಂದಲೇ ಭೂಮಿ ಮತ್ತು ಹೆಣ್ಣನ್ನು ತಾಯಿಗೆ ಹೋಲಿಸುತ್ತಾರೆ ಎಂದು ತಿಳಿಸಿದರು.ಇದೇ ವೇಳೆ ಹಿರಿಯ ಕಲಾವಿದೆ ಆಲದಹಳ್ಳಿ ಮಂಜುಳಾ, ಕಿರಿಯ ಕ್ರೀಡಾ ಸಾಧಕಿ ಮಾನ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹುರುಗಲವಾಡಿ ರಾಮಯ್ಯ, ಹನಿಯಂಬಾಡಿ ಶೇಖರ್, ವೈರಮುಡಿ ಇತರರು ಪರಿವರ್ತನಾ ಗೀತೆಗಳನ್ನು ಹಾಡಿದರು.ಬೆಂಗಳೂರು ವಿವಿ ಅಧ್ಯಾಪಕ ಡಾ.ಕುಮಾರಸ್ವಾಮಿ ಸಾಕ್ಯ, ವಕೀಲ ಎಚ್.ಎನ್. ನರಸಿಂಹಮೂರ್ತಿ, ಮಂಡ್ಯ ವಿವಿ ಅಧ್ಯಾಪಕ ಡಾ.ಗಣೇಶ್, ಮಾರ್ಗದರ್ಶಿ ಟ್ರಸ್ಟ್ ಅಧ್ಯಕ್ಷ ಕೆ.ಸಿ ಲೋಕೇಶ್, ಅರುವಿ ಟ್ರಸ್ಟ್ ಅಧ್ಯಕ್ಷೆ ಅರುಣಾ ಈಶ್ವರ್, ಸಿ.ಶಶಿಕಲಾ, ಎನ್.ಕೆ ಸೌಮ್ಯ, ಕಾಳಪ್ಪ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.