ಸಾರಾಂಶ
ಬಂಗಾರಪೇಟೆ: ಅಕ್ರಮವಾಗಿ ಭೂಗಳ್ಳರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ತಹಸೀಲ್ದಾರ್ ಕೆ.ಎನ್.ಸುಜಾತರನ್ನು ಬಂಧಿಸಬೇಕೆಂದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಸಂದೇಶ ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿ, ಸುಜಾತರನ್ನು ತಹಸೀಲ್ದಾರ್ ಆಗಿ ಮುಂದುವರೆಯಲು ಬಿಟ್ಟರೆ ತಾಲೂಕಿನಲ್ಲಿರುವ ಸರ್ಕಾರಿ ಜಮೀನುಗಳನ್ನು ಮೂರೇ ತಿಂಗಳಲ್ಲಿ ಭೂಗಳ್ಳರಿಗೆ ಮಾರಾಟ ಮಾಡುವುದರಲ್ಲಿ ಅನುಮಾನವಿಲ್ಲ. ಈ ಹಿಂದೆ ಸುಜಾತ ಕೆಜಿಎಫ್ ತಾಲೂಕು ತಹಸೀಲ್ದಾರ್ ಆಗಿದ್ದಾಗ ಸುಮಾರು ೫೦೦ ಎಕರೆಗೂ ಹೆಚ್ಚಿನ ಬಗರ್ ಹುಕುಂ ಜಮೀನನ್ನು ಬಡವರಿಗೆ ಹಂಚದೆ ಭೂ ಗಳ್ಳರಿಗೆ ಹಂಚಿ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.ಇಂತಹ ಭ್ರಷ್ಟ ಅಧಿಕಾರಿಯನ್ನು ತಹಸೀಲ್ದಾರ್ ಆಗಿ ಮುಂದುವರೆಯಲು ತಾಲೂಕಿನ ಜನರು ಬಿಡಬಾರದು. ಬಿಟ್ಟರೆ ಮತ್ತಷ್ಟು ಭ್ರಷ್ಟಾಚಾರದಲ್ಲಿ ತೊಡಗಿ ತಾಲೂಕಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಜಮೀನುಗಳಿವೆಯೋ ಅವುಗಳನ್ನು ಮೂರೇ ತಿಂಗಳಲ್ಲಿ ಮಾರಾಟ ಮಾಡುತ್ತಾರೆ. ಈಗಾಗಲೇ ಸುಜಾತ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದರಿಂದ ಇವರನ್ನು ಕೂಡಲೇ ಬಂಧಿಸಬೇಕು. ಒಂದು ವೇಳೆ ಇವರನ್ನೇ ಸರ್ಕಾರ ತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರೆಸಿದರೆ ತಾಲೂಕು ಕಚೇರಿ ಎದುರು ಸಂಘಟನೆ ವತಿಯಿಂದ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಕೆಜಿಎಫ್. ಕಣ್ಣೂರು ಗ್ರಾಮದಲ್ಲಿ ಸ್ಮಶಾನಕ್ಕಾಗಿ ಹೋರಾಟ ಮಾಡಿದರೆ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿ ಹೋರಾಟ ದಮನಕ್ಕೆ ಯತ್ನಿಸಿದರು ಎಂದು ಆರೋಪಿಸಿದರು.
ಜನಪ್ರತಿನಿಧಿಗಳು ಉತ್ತಮ ಜನಸೇವೆ ಮಾಡುವ ಕಾಳಜಿ ಹೊಂದಿರುವ ಅಧಿಕಾರಿಗಳಿದ್ದಾರೆ. ಅಂತವರನ್ನು ನಿಯೋಜಿಸುವುದನ್ನು ಬಿಟ್ಟು ಬಡವರ ವಿರೋಧಿ ಹಾಗೂ ಭ್ರಷ್ಟರಾಗಿರುವ ಸುಜಾತರನ್ನು ಯಾವುದೇ ಕಾರಣಕ್ಕೂ ತಹಸೀಲ್ದಾರ್ ಆಗಿ ಮುಂದುವರೆಸಬಾರದು ಎಂದು ಒತ್ತಾಯಿಸಿದರು.