ಸಾರಾಂಶ
ಕನ್ನಡಪ್ರಭ ವಾರ್ತೆ ಟೇಕಲ್
ಮಾಸ್ತಿ ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿ ಪ್ರಾರಂಭವಾಗಿ ಸುಮಾರು ೧೬ ವರ್ಷ ಕಳೆದರೂ ಪೂರ್ಣಗೊಳ್ಳದೆ ೧.೮೨ ಕೋಟಿ ರು. ಅನುದಾನವನ್ನು ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಕೂಡಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಬೇಕು ಹಾಗೂ ಗುತ್ತಿಗೆ ಪಡೆದಿರುವ ಲ್ಯಾಂಡ್ ಆರ್ಮಿ ಸಂಸ್ಥೆಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸುವುದರ ಜತೆಗೆ ಗುತ್ತಿಗೆ ಪರವಾನಗಿ ರದ್ದುಗೊಳಿಸಿ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಮಾಸ್ತಿ ಸಂತೆ ಮೈದಾನದ ಬಳಿಯಿರುವ ನಾಡ ಕಚೇರಿ ಸಮೀಪ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೋ.ಕೃಷ್ಣಪ್ಪ ಸ್ಥಾಪಿತ) ಹಾಗೂ ದಸಂಸ (ಅಂಬೇಡ್ಕರ್ ವಾದ) ಮಾವಳ್ಳಿ ಶಂಕರ್ ಬಣದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅನಿರ್ಧಿಷ್ಟ ಪ್ರತಿಭಟಿಸಿ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು.
ಮಾಸ್ತಿಯಲ್ಲಿ ೨೦೦೭-೦೮ನೇ ಸಾಲಿನಲ್ಲಿ ಪ್ರಾರಂಭಗೊಂಡ ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿ ನಿಲಯದ ಕಾಮಗಾರಿಯನ್ನು ಅಪೂರ್ಣ ಹಂತದಲ್ಲೇ ಸ್ಥಗಿತಗೊಳಿಸಿ, ಹಣ ಲೂಟಿ ಮಾಡಿರುವ ಲ್ಯಾಂಡ್ ಆರ್ಮಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರ ಗುತ್ತಿಗೆ ಪರವಾನಗಿ ರದ್ದುಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.ಮಾಸ್ತಿ ಸರ್ವೇ ನಂ.೫೨೫ ರಲ್ಲಿ ೬೨ ಎಕರೆ ೧೬ ಗುಂಟೆ ಉಳಿಕೆ ಸರ್ಕಾರಿ ಜಮೀನಿದ್ದು, ಆ ಜಮೀನಿನಲ್ಲಿ ಅಂಬೇಡ್ಕರ್ ಸಮುದಾಯ ಭವನ ಹಾಗೂ ಅಂಬೇಡ್ಕರ್ ಗ್ರಂಥಾಲಯಕ್ಕಾಗಿ ೫ ಎಕರೆ ಜಮೀನು ಮಂಜೂರು ಮಾಡಬೇಕು, ಅದೇ ರೀತಿ ಗ್ರಾಮದ ಸರ್ವೇ ನಂ.೩೫೦ ರಲ್ಲಿ ಸರ್ಕಾರಿ ಗುಂಡು ತೋಪಿನಲ್ಲಿ ಅಕ್ರಮವಾಗಿ ಖಾತೆಗಳನ್ನು ಮಾಡಿರುವ ಅಧಿಕಾರಿಗಳ ಮತ್ತು ಮಾಡಿಸಿಕೊಂಡಿರುವ ಪ್ರಭಾವಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಕ್ರಮ ನಕಲಿ ದಾಖಲೆಗಳನ್ನು ವಜಾಗೊಳಿಸಬೇಕು, ಹೋಬಳಿಯ ಪಾಳ್ಯ ದಲಿತರ ಸ್ಮಶಾನಕ್ಕೆ ಮಂಜೂರಾಗಿರುವ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಸರ್ವೇ ಮಾಡಿಸಿ ಒತ್ತುವರಿ ತೆರುವುಗೊಳಿಸಿ ಕಾಂಪೌಂಡ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.
ಮಾಸ್ತಿ ಹೋಬಳಿಯ ಸುತ್ತ-ಮುತ್ತಲಿನಲ್ಲಿ ಪರಿಶಿಷ್ಟ ಜಾತಿ/ಪಂಗಡ ಹೆಚ್ಚಾಗಿದ್ದು, ಮೆಟ್ರಿಕ್ ನಂತರ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ನಿಲಯವಿಲ್ಲದೆ, ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣದಿಂದ ಹೊರಗುಳಿಯುವಂತಾಗಿದ್ದು, ಕೂಡಲೇ ಮಾಸ್ತಿಯಲ್ಲಿ ಹೆಣ್ಣು ಮಕ್ಕಳ ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿನಿಲಯ ಪ್ರಾರಂಭಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಹಾಗೂ ಮಾಸ್ತಿ ಉಪ ತಹಸೀಲ್ದಾರ್ ಸಂಪತ್ ಕುಮಾರ್ ಮನವಿ ಸ್ವೀಕರಿಸಿ, ಕೂಡಲೇ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.
ಜೂ.೨೫ ರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.ಪ್ರತಿಭಟನೆಯಲ್ಲಿ ದಸಂಸ ತಾಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚವ್ವೇನಹಳ್ಳಿ ಕೆ.ವಿಜಿ, ಲಕ್ಕೂರು ವೆಂಕಟೇಶ್, ಮುಖಂಡರಾದ ಎಸ್.ಜೆ.ಸುಬ್ರಮಣಿ, ಎಸ್.ಎಂ.ವೆಂಕಟೇಶ್, ಬಂಡಹಟ್ಟಿ ನಾರಾಯಣಸ್ವಾಮಿ, ಡಿ.ನಾರಾಯಣಸ್ವಾಮಿ, ಊಸರಹಳ್ಳಿ ಗೋಪಿ, ಅಮರೇಶ್, ಅಂಗಶೆಟ್ಟಹಳ್ಳಿ ನಾರಾಯಣಸ್ವಾಮಿ, ವರದಾಪುರ ನಾರಾಯಣಸ್ವಾಮಿ, ಯಶವಂತಪುರ ಮುನಿರಾಜಪ್ಪ, ಬುಲೇಟ್ ನಾಗರಾಜ್, ನಾರಾಯಣಸ್ವಾಮಿ, ಶ್ಯಾಮಣ್ಣ, ಎಸ್.ಎಂ.ಮುರುಳಿ, ಹಳೇಹಳ್ಳಿ ತಿಮ್ಮರಾಯಪ್ಪ, ತರುಣ್, ನಾಗಾಪುರ ಅಶೋಕ್, ಬಿಟ್ನಹಳ್ಳಿ ನಾರಾಯಣಸ್ವಾಮಿ ಇದ್ದರು.