ಅಂಬೇಡ್ಕರ್ ವಿದ್ಯಾರ್ಥಿಗಳ ಶಿಕ್ಷಣದ ರಾಯಭಾರಿ: ಡಾ. ರಾಜೇಂದ್ರ ಆರ್

| Published : Apr 16 2025, 12:36 AM IST

ಅಂಬೇಡ್ಕರ್ ವಿದ್ಯಾರ್ಥಿಗಳ ಶಿಕ್ಷಣದ ರಾಯಭಾರಿ: ಡಾ. ರಾಜೇಂದ್ರ ಆರ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸಂವಿಧಾನ ಶಿಲ್ಪಿ ಸಮಾಜ ಪರಿವರ್ತಕರಾದ ಭಾರತ ರತ್ನ ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಜಯಂತಿಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತದ ಸಂವಿಧಾನದ ಶಿಲ್ಪಿ, ಸಮಾಜ ಪರಿವರ್ತಕರಾದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ನಗರದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಸೋಮವಾರ ಆಚರಿಸಲಾಯಿತು. ‌

ಭಾರತ ರತ್ನ ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಶಿಕ್ಷಣದ ಕುರಿತ ತತ್ವಗಳನ್ನು ಮುಖ್ಯ ಭಾಷಣಕಾರರಾಗಿ 2ನೇ ಬಿ.ಕಾಂ ವಿದ್ಯಾರ್ಥಿನಿ ಶ್ರುತಿ ಎಚ್.ಎನ್. ಅವರು ತಮ್ಮ ಪ್ರಭಾವಿ ಭಾಷಣದಲ್ಲಿ ವ್ಯಕ್ತಪಡಿಸಿದರು. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಅವರ ಪ್ರಗತಿಪರ ಚಿಂತನೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ರಾಘವ ಬಿ. ಈ ಸಂಭ್ರಮದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸುವ ಮಹತ್ವವನ್ನು ವಿಸ್ತಾರವಾಗಿ ವಿವರಿಸಿದರು. ಸಮಾಜ ಪರಿವರ್ತನೆಯ ಅವಶ್ಯಕತೆ, ಸಮಾನತೆಗೆ ಸಂಬಂಧಿಸಿದ ಪ್ರಬಲ ವಿಚಾರಗಳು, ಹಾಗೂ ಅಂಬೇಡ್ಕರ್ ಅವರ ಮಹತ್ವದ ಕೊಡುಗೆ ಕುರಿತಂತೆ ಚರ್ಚಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜೇಂದ್ರ ಆರ್., ಅಂಬೇಡ್ಕರ್ ಅವರು ವಿದ್ಯಾರ್ಥಿಗಳ ಶಿಕ್ಷಣದ ರಾಯಭಾರಿ, ಅವರ ಬರಹಗಳು ಮತ್ತು ಪುಸ್ತಕಗಳನ್ನು ಓದುವುದರ ಮೂಲಕ ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರೊ. ಎಂ. ಎನ್‌ .ರವಿಶಂಕರ್‌ ಮಾತನಾಡಿ ಬಡತನ ನಿರ್ಮೂಲನೆ ಸೇರಿದಂತೆ ಎಲ್ಲಾ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶಿಕ್ಷಣವೇ ಅಸ್ತ್ರ ಎಂಬುದನ್ನು ಅಂಬೇಡ್ಕರ್ ಅವರು ನಿರೂಪಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಹೇಂದ್ರ ಎನ್.ವಿ. ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿವೆ, ಅವುಗಳನ್ನು ತೊಡೆದು ಹಾಕಲು ಸಂವಿಧಾನದ ಮೂಲ ಆಶಯವನ್ನು ಸಾಕಾರಗೊಳಿಸಲು ನಾವು ಬದಲಾಗಿ ಎಲ್ಲರನ್ನೂ ಬದಲಾಯಿಸಬೇಕೆಂದು ಅಭಿಪ್ರಾಯ ಪಟ್ಟರು.

ಎನ್‌ಎಸ್‌ಎಸ್ ನಾಯಕ ಮನೋಜ್ ಮಾತನಾಡಿ, ಜಮೀನ್ದಾರಿ ಪದ್ಧತಿಯ ಬದಲು ಬಂಡವಾಳಶಾಹಿ ಪದ್ಧತಿಯ ಮುಖಾಂತರ ಜೀತಪದ್ಧತಿ ಮತ್ತು ಶೋಷಣೆ ಇನ್ನೂ ಸಮಾಜದಲ್ಲಿ ಇದೆ, ಇದನ್ನು ತೊಡೆದು ಹಾಕಬೇಕಿದೆ, ಭಾರತ ರತ್ನ ಅಂಬೇಡ್ಕರ್ ಅವರು ಎಲ್ಲ ಜನಾಂಗಗಳಿಗೆ ಉಪಯೋಗವಾಗಿರುವ ಕಾರ್ಯಮಾಡಿದ ಮಹಾನಾಯಕರಾಗಿದ್ದಾರೆ ಎಂದರು.

ಸಂವಿಧಾನ ಪೀಠಿಕೆಯನ್ನೋದಿ ಪ್ರಮಾಣವಚನ ಸ್ವೀಕರಿಸಿದ ಈ ಕಾರ್ಯಕ್ರಮದಲ್ಲಿ ಎನ್‌ಸಿಸಿ ನಾಯಕರಾದ ಮೋನೇಶ್ ಮತ್ತು ಗುಣಶೇಖರ್ ಹಾಗೂ ಹಿಂದಿ ಉಪನ್ಯಾಸಕಿ ಕುರ್ಶಿದ್‌ ಬಾನು ಅವರು ತಮ್ಮ ಹಾಜರಾತಿಯೊಂದಿಗೆ ಕಾರ್ಯಕ್ರಮವನ್ನು ಇನ್ನಷ್ಟು ಪ್ರಭಾವಶಾಲಿ ಮಾಡಿದರು.

ಯುವ ಪೀಳಿಗೆಗೆ ಹೊಸ ದಾರಿಯನ್ನು ತೋರಿಸುವ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಅವಕಾಶ ಎಂಬ ಮಹತ್ವವನ್ನು ಒತ್ತಿಹಿಡಿಯಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗು ಉಪನ್ಯಾಸಕರು ಭಾಗವಹಿಸಿದ್ದರು.

ಕಾರ್ಯಕ್ರಮದ ನಿರ್ವಹಣೆಯನ್ನು ವರ್ಷಾ ಟಿ.ವಿ. ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಿಶ್ಮಿತ ಎಸ್.ಎಂ ಮತ್ತು ಕವನ ಎಸ್.ಪಿ ಪ್ರಾರ್ಥಿಸಿದರು. ಅಮೃತಾ ಎಂ.ಕೆ. ಅವರು ಸ್ವಾಗತಿಸಿ, ಕೌಶಲ್ಯ ರೈ ವಂದಿಸಿದರು.