ಸಾರಾಂಶ
ಸಿಂಧನೂರು ತಾಲ್ಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರವರ ನೂತನ ಪುತ್ಥಳಿ ಅನಾವರಣ ಸಮಾರಂಭ ಉದ್ಘಾಟಿಸಿ ದಲಿತ ಚಿಂತಕ ಅಂಬಣ್ಣ ಆರೋಲಿಕರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಂವಿಧಾನ ರಚಿಸುವ ಮೂಲಕ ಎಲ್ಲರಿಗೂ ಸಮಾನತೆಯ ಹಕ್ಕು ಕಲ್ಪಿಸಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳು, ತತ್ವ ಸಿದ್ದಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ದಲಿತ ಚಿಂತಕ ಅಂಬಣ್ಣ ಆರೋಲಿಕರ್ ಹೇಳಿದರು.ತಾಲ್ಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರವರ ನೂತನ ಪುತ್ಥಳಿ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯದಿಂದಲೇ ಅಪಮಾನ, ಶೋಷಣೆ ಅನುಭವಿಸಿದ್ದ ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆದು ಶೋಷಿತರೆಲ್ಲರಿಗೂ ಸಮಾನತೆ, ಸ್ವಾಭಿಮಾನ ಮತ್ತು ಘನತೆಯ ಬದುಕು ಒದಗಿಸಿಕೊಡಬೇಕೆಂದು ಸಂಕಲ್ಪದಿಂದ ಭಾರತ ಸಂವಿಧಾನ ರಚಿಸಿದ್ದಾರೆ ಎಂದು ಹೇಳಿದರು.ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಮಾತನಾಡಿ, ಅಂಬೇಡ್ಕರ್ ಅವರ ಜೀವನ, ಸಾಧನೆ, ತತ್ವ-ಸಿದ್ಧಾಂತಗಳು ಮತ್ತು ಸಂವಿಧಾನವನ್ನು ಇಂದಿನ ವಿದ್ಯಾರ್ಥಿ, ಯುವ ಪೀಳಿಗೆ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು.
ಜಾತಿ ನಿರ್ಮೂಲನಾ ಚಳವಳಿ ಸಂಸ್ಥಾಪಕ ಎಚ್.ಎನ್.ಬಡಿಗೇರ್, ಮಾದಿಗ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮರಿಯಪ್ಪ ಜಾಲಿಹಾಳ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡರಾದ ಲಿಂಗರಾಜಪ್ಪಗೌಡ ಹಂಚಿನಾಳ, ವೆಂಕಟೇಶ ರಾಗಲಪರ್ವಿ ಮಾತನಾಡಿದರು. ಅಂಬೇಡ್ಕರ್ ಮೂರ್ತಿ ಅನಾವರಣ ಸಮಿತಿ ಸಂಚಾಲಕ ವಿರುಪಣ್ಣ ನಂದವಾಡಗಿ ಅಧ್ಯಕ್ಷತೆ ವಹಿಸಿದ್ದರು. ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಮುಖಂಡರಾದ ಶಂಭಣ್ಣ ಸಾಹುಕಾರ ಹಂಚಿನಾಳ, ಆರ್.ಅಂಬ್ರೂಸ್, ಲಕ್ಷ್ಮಣ ಮೂಡಲಗಿರಿ ಕ್ಯಾಂಪ್, ದುರ್ಗಾಪ್ರಸಾದ್, ಅಜಯ್ ನಾಡಗೌಡ ಸೇರಿ ಇತರರು ಇದ್ದರು. ರಂಗಮ್ಮ ಗಲಗಿನ್ ಪ್ರಾರ್ಥಿಸಿದರು. ಬಸವರಾಜ ಸ್ವಾಗತಿಸಿದರು. ಗ್ರಾ.ಪಂ ಮಾಜಿ ಸದಸ್ಯ ಪೆಥುರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಮತ್ತು ಬಸವರಾಜ ಬಳಿಗಾರ ನಿರೂಪಿಸಿದರು.