ಅಂಬೇಡ್ಕರ್ ಶೋಷಿತರು ದೇಶ ಆಳುವ ಆಶಯ ಹೊಂದಿದ್ದರು

| Published : Apr 21 2025, 12:50 AM IST

ಸಾರಾಂಶ

ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ತಿಪ್ಪೇಸ್ವಾಮಿ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯಲಾರೆನೆಂದು ಹೇಳಿದ್ದ ಬಾಬಾ ಸಾಹೇಬರು ರಾಷ್ಟ್ರೀಯತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.ನಗರದ ಕೋಟೆ ನಾಡು ಬುದ್ಧವಿಹಾರದಲ್ಲಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅವಕಾಶ ವಂಚಿತ ಶೋಷಿತ ಜಾತಿಗಳಿಗೆ ಸಾಮಾಜಿಕ ನ್ಯಾಯ ಪಡೆಯಲು ಮೀಸಲಾತಿ ಎಂಬ ಅಸ್ತ್ರವನ್ನು ಬಾಬಾ ಸಾಹೇಬರು ನೀಡಿದರು. ಈ ಮುಖೇನ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗೊಂಡ ಶೋಷಿತರು ಈ ದೇಶವನ್ನು ಆಳುವಂತೆ ಆಗಬೇಕೆಂಬುದು ಬಾಬಾ ಸಾಹೇಬರ ಕನಸಾಗಿತ್ತು. ಆದರೆ ಮೀಸಲಾತಿಯನ್ನು ಹಂಚಿಕೊಳ್ಳಲು ಅಸ್ಪೃಶ್ಯರೇ ಸಂಘರ್ಷಿಸುತ್ತಿರುವುದು ಶೋಚನೀಯವಾಗಿದೆ ಎಂದರು.

ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಜಾತಿ ಪ್ರಮಾಣ ಪತ್ರ ಪಡೆದಿರುವ ಮಾದಿಗರು ತಮ್ಮ ಕ್ರಮ ಸಂಖ್ಯೆಯನ್ನು 61 ಮಾದಿಗ ಎಂದು ಬರೆಸುವ ಮೂಲಕ ತಮ್ಮ ಜಾತಿಯ ಜನಸಂಖ್ಯೆಯನ್ನು ಸ್ಪಷ್ಟವಾಗಿ ದಾಖಲಿಸಬೇಕು. ಹೊಲೆಯ ಸಂಬಂಧಿತ ಜಾತಿಗಳು ತಮ್ಮ ಜಾತಿಯನ್ನು ಹೊಲೆಯ ಎಂದು ಸ್ಪಷ್ಟವಾಗಿ ದಾಖಲಿಸುವುದರಿಂದ ತಮ್ಮ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಸಹೋದರತ್ವದ ಮೂಲಕ ಮೀಸಲಾತಿಯನ್ನು ಹಂಚಿಕೊಳ್ಳುವ ಅನಿವಾರ್ಯತೆ ಇದೆ. ಭೋವಿ ಲಂಬಾಣಿ, ಕೊರಚ, ಕೊರಮ ಇತರೆ ಯಾವುದೇ ಪರಿಶಿಷ್ಟಜಾತಿಗೆ ಅನ್ಯಾಯವಾಗದಂತೆ ಮೀಸಲಾತಿ ಹಂಚುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಎತ್ತಿ ಹಿಡಿಯಬೇಕಾಗಿದೆ. ಏಕೆಂದರೆ ಅಸ್ಪೃಶ್ಯರಿಗೆ ಮೀಸಲಾತಿಯಲ್ಲಿ ಪಾಲು ಪಡೆಯುವುದೇ ಅಂತಿಮವಲ್ಲ. ಒಳ ಮೀಸಲಾತಿ ಜಾರಿಯಾದ ನಂತರದಲ್ಲಿ ಹೊಲೆಯ ಮಾದಿಗರು ಒಂದಾಗುವ ಸ್ಥಿತಿ ನಿರ್ಮಾಣವಾಗದಿದ್ದರೆ ಅಂಬೇಡ್ಕರ್ ವಾದಿಗಳೆಲ್ಲರೂ ಅಂಬೇಡ್ಕರ್ ಚಳುವಳಿಯನ್ನು ಸೋಲಿಸಿದಂತೆಯೇ ಸರಿ. ಫೇಸ್‌ಬುಕ್ ವಾಟ್ಸ್‌ಆಪ್ ಗಳಲ್ಲಿ ಕೆಲವರು ಇಡೀ ಮಾದಿಗ ಅಥವಾ ಹೊಲಯ ಜನಾಂಗದ ಪ್ರತಿನಿಧಿಗಳು ಎಂಬಂತೆ ಪರಸ್ಪರ ತಿಕ್ಕಾಟದ ಹೇಳಿಕೆ ನೀಡುತ್ತಿರುವುದು ಅಕ್ಷಮ್ಯವಾದದ್ದು. ಈ ಸಂಬಂಧ ಎರಡು ಸಮುದಾಯದ ಪ್ರಬುದ್ಧರು ಕಿರಿಯರಿಗೆ ಸೂಕ್ತ ತಿಳುವಳಿಕೆ ನೀಡುವ ಅವಶ್ಯಕತೆ ಇದೆ. ಒಳ ಮೀಸಲಾತಿ ಜಾರಿ ವಿಳಂಬವಾದಷ್ಟು ಶೋಷಿತ ಜಾತಿಗಳ ನಡುವಿನ ಸಂಘರ್ಷಕ್ಕೆ ಸಾಮಾಜಿಕ ನ್ಯಾಯದ ಹರಿಕಾರರೆಂದೆ ಖ್ಯಾತಿಯಾದ ಸಿಎಂ ಸಿದ್ದರಾಮಯ್ಯನವರ ಸರ್ಕಾರವೇ ಕಾರಣವಾದಂತಾಗುತ್ತದೆ. ತೆರಿಗೆ ಸಂಗ್ರಹದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲನೇ ಸ್ಥಾನ ಪಡೆದ ಕರ್ನಾಟಕ ವಾಸ್ತವದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ ರಾಜ್ಯಗಳಿಗಿಂತ ಒಳ ಮೀಸಲಾತಿ ಹಂಚಿಕೆಯಲ್ಲಿ ಹಿಂದೆ ಬಿದ್ದದ್ದು ದುರದೃಷ್ಟಕರವಾದದ್ದು ಎಂದರು.

ಬಿಎಸ್ಐನ ಜಿಲ್ಲಾ ಕಾರ್ಯದರ್ಶಿ ನನ್ನಿವಾಳ ರವಿ ಮಾತನಾಡಿ, ಅಂಬೇಡ್ಕರ್ ಎಂದರೆ ಹಕ್ಕುಗಳ ರಕ್ಷಕ, ಹಕ್ಕು ಬಾಧ್ಯತೆಗಳ ಹಂಚಿಕೆಯಲ್ಲಿ ಸಾಮರಸ್ಯ ಮೂಡದಿದ್ದರೆ ಬಹುತ್ವದ ಭಾರತಕ್ಕೆ ನೆಲೆ ಇರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಪ್ರೇಮನಾಥ್, ಉಪನ್ಯಾಸಕ ನಾಗೇಂದ್ರಪ್ಪ, ಶಿಕ್ಷಕಿ ಶಿಲ್ಪಾ, ಉಷಾ, ತಿಪ್ಪಮ್ಮ, ಬೆಸ್ಕಾಂ ತಿಪ್ಪೇಸ್ವಾಮಿ, ಬನ್ನಿಕೋಡ್ ರಮೇಶ್, ತಿಪಟೂರ್ ಮಂಜು , ಸಚಿನ್ ಗೌತಮ್ ಮುಂತಾದವರು ಹಾಜರಿದ್ದರು.