ಅಂಬೇಡ್ಕರ್‌ ಅಗಾಧ ಪಾಂಡಿತ್ಯವುಳ್ಳ ಶ್ರೇಷ್ಠ ಮಾನವತಾವಾದಿ

| Published : Dec 08 2024, 01:17 AM IST

ಅಂಬೇಡ್ಕರ್‌ ಅಗಾಧ ಪಾಂಡಿತ್ಯವುಳ್ಳ ಶ್ರೇಷ್ಠ ಮಾನವತಾವಾದಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಭಾರತದಲ್ಲಿ ಕೇವಲ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರಗಳಿಸಿದ್ದು, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಸಮಾಜದ ವೈಚಾರಿಕ ಅಮೃತವಾಹಿನಿಯನ್ನು ಎದೆಯಿಂದ ಎದೆಗೆ ಹರಿಸಬೇಕಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಮೇಟಿ ಮಲ್ಲಿಕಾರ್ಜುನ ಹೇಳಿದರು.

ಶಿವಮೊಗ್ಗ: ಭಾರತದಲ್ಲಿ ಕೇವಲ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರಗಳಿಸಿದ್ದು, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಸಮಾಜದ ವೈಚಾರಿಕ ಅಮೃತವಾಹಿನಿಯನ್ನು ಎದೆಯಿಂದ ಎದೆಗೆ ಹರಿಸಬೇಕಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಮೇಟಿ ಮಲ್ಲಿಕಾರ್ಜುನ ಹೇಳಿದರು.

ಮಿಲಿಂದ ಸಂಸ್ಥೆಯು ಶ್ರೀ ಕಲಾಕೌಶಲ್ಯಾಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್‌ ಅವರ 68ನೇ ಮಹಾಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಅಂಬೇಡ್ಕರ್ ಅವರು 250 ವರ್ಷಗಳಲ್ಲಿ ಸಾಧಿಸಬೇಕಾದ ವಿದ್ವತ್‍ನ್ನು ತಮ್ಮ ಜೀವಿತಾವಧಿಯಲ್ಲಿ ಸಾಧಿಸಿದ ಅಗಾಧ ಪಾಂಡಿತ್ಯವುಳ್ಳ ಶ್ರೇಷ್ಠ ಮಾನವತಾವಾದಿ ಎಂದು ಬಣ್ಣಿಸಿದರು.ಕೇವಲ ದಲಿತರಿಗಾಗಿಯಲ್ಲದೆ ಇಡೀ ಎಲ್ಲಾ ಜನವರ್ಗಗಳ ಹಕ್ಕು ಮತ್ತು ಒಳಿತಿಗಾಗಿ ದುಡಿದ ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನ ಬರೆದವರು ಎಂದು ಸೀಮಿತಿಗೊಳಸಲಾಗದು, ಅದಕ್ಕಾಗಿ ಅವರು ಪಟ್ಟ ಪರಿಶ್ರಮ, ಗಳಿಸಿದ ಜ್ಞಾನ ಅಪರಿಮಿತವಾದದ್ದು. ಆ ಕಾರಣದಿಂದಲೇ ಭಾರತಕ್ಕೆ ಶ್ರೇಷ್ಠ ಸಂವಿಧಾನ ಬರೆಯಲು ಸಾಧ್ಯವಾಯಿತು ಎಂದು ತಿಳಿಸಿದರು. ಇಂದು ಚುನಾವಣಾ ರಾಜಕಾರಣವೇ ಪ್ರಧಾನವಾಗಿದ್ದು, ರಾಜಕೀಯ ಧ್ರುವೀಕರಣವಾಗುತ್ತಿದೆಯೇ ಹೊರತು, ಪ್ರಜಾಪ್ರಭುತ್ವದಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಒಬ್ಬ ವ್ಯಕ್ತಿ, ಒಂದು ಮೌಲ್ಯ ಎನ್ನುವುದು ಮರೆಗೆ ಸರಿಸಲಾಗುತ್ತಿದೆ. ಈ ಸಿದ್ಧಾಂತದ ತಾತ್ವಿಕತೆಯನ್ನು ಸಾಧಿಸಲಾಗುತ್ತಿಲ್ಲ. ಅಂಬೇಡ್ಕರ್ ಅವರಿಗಿದ್ದ ನೈತಿಕ ಧೈರ್ಯವೇ ದೊಡ್ಡ ಗುಣ ಎಂದರು.ಪೂನಾ ಒಪ್ಪಂದದ ಸಂದರ್ಭದಲ್ಲಿ ಮತ್ತು ಹಿಂದೂ ಕೋಡ್ ಬಿಲ್ ಮಂಡನೆ ಸಂದರ್ಭದಲ್ಲಿ ಅಂಬೇಡ್ಕರ್ ನೈತಿಕ ಧೈರ್ಯದಿಂದ ರಾಜೀಗೆ ಒಳಗಾಗಬೇಕಾಯಿತು. ಸಮಾಜವನ್ನು ನಿರ್ಮಿಸುವ ಸಮತವಾದ ಒಂದು ದೊಡ್ಡ ವಾತಾವರಣವನ್ನು ಸೃಷ್ಟಿ ಮಾಡುವುದಕ್ಕಾಗಿ ಅಂಬೇಡ್ಕರ್ ನೈತಿಕ ಧೈರ್ಯದಿಂದ ರಾಜೀ ಆದರೆ ವಿನಃ ಯಾವುದೇ ಅಧಿಕಾರ, ಪ್ರಶಸ್ತಿಗಳಿಗಾಗಿ ಅಲ್ಲ ಎಂದು ತಿಳಿಸಿದರು.ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾದ ಸ್ವಾತಂತ್ರ್ಯ, ಸಮಾನತೆ, ಬಾಂಧವ್ಯವನ್ನು ಅನುಷ್ಠಾನಗೊಳಿಸಬೇಕಾದರೆ ಅಂಬೇಡ್ಕರ್ ಕಂಡ ವೈಚಾರಿಕ ಪ್ರಧಾನ ಸಮಾಜವವನ್ನು ಕಟ್ಟಬೇಕಿದೆ. ಅದುವೇ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ನಿವೃತ್ತ ಅಬಕಾರಿ ಅಧಿಕಾರಿ ಬಿ.ಡಿ.ಸಾವಕ್ಕನವರ, ತಳಸಮುದಾಯಗಳಿಗೆ ವಿಮೋಚನೆ ದಾರಿ ಎಂದರೆ ಒಗ್ಗಟ್ಟು ಮತ್ತು ಎಚ್ಚರಗಳು ಮಾತ್ರ. ಅವುಗಳಿಲ್ಲದೆ ಬದಲಾವಣೆ ಸಾಧ್ಯವಿಲ್ಲ ಎಂದರು.ಮಿಲಿಂದ ಸಂಸ್ಥೆಯ ಗೌರವಾಧ್ಯಕ್ಷರಾದ ಅಣ್ಣಪ್ಪ ಆಯನೂರು ಕೋಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಪತ್ರಕರ್ತ ಎನ್‌.ರವಿಕುಮಾರ್, ರಂಗ ನಿರ್ದೇಶಕ ಕೊಟ್ರಪ್ಪ ಹಿರೇಮಾಗಡಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕುಂದೂರಪ್ಪನವರ್, ನಿವೃತ್ತ ಪ್ರಾಚಾರ್ಯ ರಾಚಪ್ಪ, ಹಿರಿಯ ಪತ್ರಕರ್ತ ಆರ್.ಟಿ.ನಟರಾಜ್, ಪ್ರಾಧ್ಯಾಪಕ ಗೌತಮ್, ವಕೀಲ ಮಂಜುನಾಥ್, ಲೇಖಕ ಸೂರ್ಯಪ್ರಕಾಶ್, ಈದಿನ ಡಾಟ್ ಕಾಮ್ ಪತ್ರಕರ್ತ ರಾಘು, ಹಿರಿಯ ಶಿಕ್ಷಕಿ ಎಚ್.ಸಿ.ಸವಿತ, ಮಿಲಿಂದ ಸಂಸ್ಥೆಯ ಸಲಹೆಗಾರ ಪ್ರೊ.ಬಿ.ಎಲ್.ರಾಜು ಮತ್ತಿತರರಿದ್ದರು.