ಸಾರಾಂಶ
ದೇಶದ ಕೆಲವೇ ಮೇಧಾವಿಗಳಲ್ಲಿ ಅವರೂ ಒಬ್ಬರು. ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ. ಎಲ್ಲರೂ ಮನುಷ್ಯರಾಗಿ ಬದುಕಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಂಬೇಡ್ಕರ್ ಅವರು ಕೇವಲ ದಲಿತರ ನಾಯಕರಾಗಿರದೇ ಸಮಾಜದಲ್ಲಿ ಶೋಷಿತರು, ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಅನ್ಯಾಯದಿಂದ ಮುಕ್ತಿ ಪಡೆಯಬೇಕೆಂದು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಅಂಗವಾಗಿ ನಗರದ ಜೈಭೀಮ್ ಮೆಮೋರಿಯಲ್ ಹಾಸ್ಟೆಲ್ ಆವರಣದಲ್ಲಿನ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿ, ಮಹಾನ್ ಮೇಧಾವಿಯಾಗಿದ್ದ ಅಂಬೇಡ್ಕರ್, ಅವರ ಸ್ವಾರ್ಥಕ್ಕಾಗಿ ಓದಿಕೊಳ್ಳದೆ ಶೋಷಿತರ, ಅಸ್ಪೃಶ್ಯತೆಯಿಂದ ನರಳುತ್ತಿರುವವ ಜನರಿಗೆ ವಿಮೋಚನೆ ನೀಡಲೆಂದೇ ಜ್ಞಾನಾರ್ಜನೆ ಮಾಡಿಕೊಂಡಿದ್ದರು ಎಂದರು.
ದೇಶದ ಕೆಲವೇ ಮೇಧಾವಿಗಳಲ್ಲಿ ಅವರೂ ಒಬ್ಬರು. ದೇಶ ಕಂಡ ಮಹಾನ್ ನಾಯಕರು ಹಾಗೂ ಮಾನವತಾವಾದಿ. ಎಲ್ಲರೂ ಮನುಷ್ಯರಾಗಿ ಬದುಕಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ದೊರಕಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರಕಬೇಕು. ಹಾಗಾದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಅಸ್ಪೃಶ್ಯತೆ ನಾಶವಾಗಬೇಕು ಎಂದು ಅಂಬೇಡ್ಕರ್ ಶ್ರಮಿಸಿದ್ದರು ಎಂದರು.ಭಾರತದ ಪ್ರತಿ ಪ್ರಜೆಯೂ ಸಹ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕೊಡುಗೆಗಳನ್ನು ನೆನೆದು, ಅವರನ್ನು ಸ್ಮರಿಸಿ, ಗೌರವಿಸಬೇಕಾದ ದಿನ. ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ ಎಂಬ ತಮ್ಮ ಸಂದೇಶದಿಂದ ಆರಂಭವಾಗಿ, ಪ್ರಜೆಗಳು ತಾವು ಏನೆಲ್ಲ ಸ್ವತಂತ್ರವನ್ನು ಪಡೆದಿರಬೇಕು, ಹೇಗೆ ಗೌರವಿಸಬೇಕು, ಹೇಗೆ ಬಳಸಿಕೊಳ್ಳಬೇಕು, ಎಲ್ಲಿಯವರೆಗೆ ಬಳಸಿಕೊಳ್ಳಬೇಕು ಎಂಬುವವರೆಗಿನ ಬೃಹತ್ ಸಂವಿಧಾನವನ್ನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ, ದೇಶದ ಪ್ರತಿಯೊಬ್ಬರ ಪಾಲಿಗೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ನೀಡಿದ ಹಿಂದಿನ ದೊಡ್ಡ ಶಕ್ತಿ ಯಾಗಿದ್ದಾರೆ ಎಂದರು.ಈ ವೇಳೆ ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ದಲಿತ ಮುಖಂಡ ಬಿ.ಎನ್.ಗಂಗಾಧರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ಅರುಣ್, ಮತ್ತಿತರರು ಇದ್ದರು. ಸಿಕೆಬಿ-5 ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಜೈಭೀಮ್ ಮೆಮೋರಿಯಲ್ ಹಾಸ್ಟೆಲ್ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಸಂಸದ ಡಾ.ಕೆ.ಸುಧಾಕರ್ ಮಾಲಾರ್ಪಣೆ ಮಾಡಿದರು.