ಸಾರಾಂಶ
ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ
ಸದಾ ನೋವು, ಅಪಮಾನಗಳ ಉಂಡ ಕಾರಣಕ್ಕೆ ಅಂಬೇಡ್ಕರ್ ಅವರು ಸಂವಿಧಾನ ಬರೆಯಲು ಸಾಧ್ಯವಾಯಿತೆಂದು ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿ ಡಾ.ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಹೇಳಿದರು.ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜೈಭೀಮ್ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್, ಬಾಬೂ ಜಗಜೀವನ ರಾಂ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಶೋಷಿತ ಸಮುದಾಯಗಳ ಅಂಬೇಡ್ಕರ್ ಆಶಯಗಳ ಪಾಲಿಸುವುದರ ಮೂಲದ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು. ಶಿಕ್ಷಣ, ಸಂಘಟನೆ, ಹೋರಾಟವೆಂಬ ಧ್ಯೇಯಗಳ ಮರೆಯಬಾರದೆಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲರಾಜ್ ಮಾತನಾಡಿ, ದೇಶಕ್ಕೆ ಸಂವಿಧಾನ ನೀಡಿದ ಅಂಬೇಡ್ಕರ್ ವಿಶ್ವಜ್ಞಾನಿ. ಅವರು ನೀಡಿದ ಸಂವಿಧಾನ ನಮಗೆ ಸ್ವಾಭಿಮಾನದಿಂದ ತಲೆ ಎತ್ತಿಕೊಂಡು ಬದಕುವ ಅವಕಾಶ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಜಯಂತಿಯ ಹಬ್ಬದ ರೀತಿಯಲ್ಲಿ ಆಚರಿಸೋಣವೆಂದರು.ನಿವೃತ್ತ ಉಪ ವಿಭಾಗಾಧಿಕಾರಿ ತಹಶೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿ ಅಂಬೇಡ್ಕರ್ ಶಿಸ್ತಿನ ವ್ಯಕ್ತಿಯಾಗಿದ್ದು ಶೋಷಿತ ಸಮುದಾಯ ಏಳಿಗೆ ಆಗಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಅಂದಿದ್ದರು. ಅಂಬೇಡ್ಕರ್ ಮೀಸಲಾತಿ ನೀಡಿದ್ದರಿಂದಲೇ ನಾನು ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ಆಗಲು ಸಾಧ್ಯವಾಯಿತು. ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂದರು.
ದಲಿತ ಮುಖಂಡ ಶಿವಮೂರ್ತಿ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ಅಂಬೇಡ್ಕರ್‌ರವರ ಸಿದ್ದಾಂತವನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಸಂವಿಧಾನದಿಂದಲೇ ತಿಮ್ಮಪ್ಪಯ್ಯನಹಳ್ಳಿ ಗ್ರಾಪಂಗೆ ಶೈಲಮಂಜಣ್ಣ ಅಧ್ಯಕ್ಷರಾಗಿದ್ದಾರೆ. ಜಾತಿ ಗಣತಿ ಗೆ ಹಳ್ಳಿಗಳಿಗೆ ಅಧಿಕಾರಿಗಳ ತಂಡ ಬರಲಿದ್ದು ಜಾತಿ ಕಾಲಂ ನಲ್ಲಿ ಮಾದಿಗ ಎಂದು ಹೆಸರು ನೊಂದಾಯಿಸಬೇಕೆಂದು ಹೇಲಿದರು. ದಲಿತ ಮುಖಂಡ ಡಿ.ರಾಜಪ್ಪ ಮಾತನಾಡಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ರವರು ಜಯಂತಿ ಅದ್ದೂರಿಯಾಗಿ ಆಚರಿಸುತ್ತಿರುವುದು ಖುಷಿತಂದಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎನ್ನುವ 3 ಮಂತ್ರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ನಿವೃತ್ತ ತಹಸೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಅಂಬೇಡ್ಕರ್ ಶೋಷಿತ ಸಮುದಾಯಗಳಿಗೆ ಬೆಳಕು ನೀಡಿದ ಮಹಾನ್ ವ್ಯಕ್ತಿ ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ವಿನೋದಸ್ವಾಮಿ, ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ಅಧ್ಯಕ್ಷೆ ಶೈಲಮಂಜಣ್ಣ, ಹರಿಪ್ರಸಾದ್, ಕೆಪಿಸಿಸಿ ರಾಜ್ಯ ಸಂಚಾಲಕ ಹಿರೇಹಳ್ಳಿ ಮಲ್ಲೇಶ್, ನಿಂಗರಾಜ್, ಕುದಾಪುರ ತಿಪ್ಪೇಸ್ವಾಮಿ, ಡಿಎಸ್ಎಸ್ ಮುಖಂಡ ಟಿ.ಮಂಜಣ್ಣ, ವೈ.ಬಸವರಾಜ್, ಉಪನ್ಯಾಸಕರಾದ ಹನುಮಂತ, ಶಿವಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯ ರೇವಣ್ಣ, ಹಟ್ಟಿ ಯಜಮಾನರು ಇದ್ದರು.