ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಎಂದಿಗೂ ಸೀಮಿತವಾಗಿಲ್ಲ: ಶಾಸಕ ಎಚ್.ಕೆ.ಸುರೇಶ್

| Published : May 05 2024, 02:03 AM IST

ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಎಂದಿಗೂ ಸೀಮಿತವಾಗಿಲ್ಲ: ಶಾಸಕ ಎಚ್.ಕೆ.ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿದ್ದ ಅಸಮಾನತೆಯ ವಿರುದ್ಧ ಹೋರಾಟ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ತಾವೇ ಬರೆದ ಸಂವಿಧಾನದಲ್ಲಿ ಸಮಾನ ಮೀಸಲಾತಿ ತರುವ ಮೂಲಕ ಸರ್ವರಿಗೂ ಸಮಾನ ಅವಕಾಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಭಾರತದ ಸಂವಿದಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಒಂದು ಜಾತಿ, ವರ್ಗ, ಧರ್ಮಕ್ಕೆ ಎಂದಿಗೂ ಸೀಮಿತವಾಗಿಲ್ಲ. ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.

ತಾಲೂಕಿನ ಅಡಗೂರು ಕೋಡಿಹಳ್ಳಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದವರು ಏರ್ಪಡಿಸಿದ್ದ ಅಂಬೇಡ್ಕ‌ರ್ ರವರ 133ನೇ ಜನ್ಮದಿನೋತ್ಸವ ಸಮಾರಂಭ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ವಿಶ್ವದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಮಾತ್ರ ದಾರ್ಶನಿಕರ ಗುಂಪಿಗೆ ಸೇರುತ್ತಾರೆ. ಈ ಮೂವರು ಸಮಾಜದಲ್ಲಿನ ಅಂಕು- ಡೊಂಕುಗಳ ಜೊತೆಯಲ್ಲಿ ಸಮಾಜದಲ್ಲಿ ಬೇರು ಬಿಟ್ಟಿದ್ದ ಜಾತಿ ಪದ್ಧತಿಗಳ ನಿವಾರಣೆಗೆ ಅವಿರತ ಹೋರಾಟ ಮಾಡಿದ ಮಹಾನ್ ಪುರುಷರು.ಇವರ ವಿಚಾರಧಾರೆಗಳು ಇಡೀ ಮನುಕುಲಕ್ಕೆ ಮಾರ್ಗದರ್ಶನವಾಗಬೇಕಿದೆ ಎಂದರು.

ನಿವೃತ್ತ ಉಪಾನ್ಯಾಸಕ ರಂಗಪ್ಪ ಮಾತನಾಡಿ, ಸಮಾಜದಲ್ಲಿದ್ದ ಅಸಮಾನತೆಯ ವಿರುದ್ಧ ಹೋರಾಟ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ತಾವೇ ಬರೆದ ಸಂವಿಧಾನದಲ್ಲಿ ಸಮಾನ ಮೀಸಲಾತಿ ತರುವ ಮೂಲಕ ಸರ್ವರಿಗೂ ಸಮಾನ ಅವಕಾಶ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂವಿಧಾನದ ಹಕ್ಕು ಕರ್ತವ್ಯಗಳು ಮತ್ತು ಅಂಬೇಡ್ಕರ್ ನಾಡಿಗೆ ನೀಡಿದ ಅಮೂಲ್ಯ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ನಮನ ಸಲ್ಲಿಸಬೇಕು. ಪ್ರಸ್ತುತ ಯುವಕರು ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಬಿಜೆಪಿ ಮುಖಂಡ ತೆಂಡೇಕೆರೆ ರಮೇಶ್ ಮಾತನಾಡಿ, ಯುವ ಜನಾಂಗ ವಿಶ್ವದ ಮಹನೀಯರ ಸಂದೇಶ ಹಾಗೂ ಅವರ ಆದರ್ಶ ಬದುಕಿನ ಬಗ್ಗೆ ಸಮಗ್ರ ಅಧ್ಯಯನ ಮಾಡುವ ಮೂಲಕ ಸದೃಢ ಸಮಾಜಕ್ಕೆ ಮುನ್ನಡಿ ಬರೆಯಬೇಕಿದೆ. ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದಲ್ಲಿ ಸಮಾನ ಅವಕಾಶ, ಹಕ್ಕು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಇಂತಹ ಅನನ್ಯ ಕಾಣಿಕೆ ನೀಡಿದ ಅಂಬೇಡ್ಕರ್ ವಿಚಾರಧಾರೆಗಳು ಪ್ರಸಕ್ತ ಸಮಾಜಕ್ಕೆ ದಾರಿದೀಪ ಎಂದರು.

ಅಡಗೂರು ಕೋಡಿಹಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಹಾಲಪ್ಪ ಮುಖಂಡರಾದ ರಾಜಪ್ಪ , ಪ್ರಾಂಶುಪಾಲ ಭೂದೇಶ, ಶಿಕ್ಷಕ ರಾಜು, ಕೆಎಸ್‌ಆರ್‌ಟಿಸಿ ನಿವೃತ್ತ ನಿರೀಕ್ಷಕ ಧರ್ಮಯ್ಯ, ಭೂದೇಶ, ಕೆಎಸ್‌ಆರ್‌ಟಿಸಿ ಕುಮಾರ್, ಕೆಎಸ್‌ಆರ್‌ಟಿಸಿ ಪುಟ್ಟರಾಜ್ ಮತ್ತಿತರರು ಇದ್ದರು.