ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಮಾದಿಗ ಸಮಾಜದವರು ಶಿಕ್ಷಣದ ಮಹತ್ವ ಅರಿತುಕೊಳ್ಳಬೇಕು. ವಿದ್ಯೆಯಿಂದ ಮಾತ್ರ ನಾವು ಪ್ರಪಂಚದಲ್ಲಿ ಎಲ್ಲಾದರೂ ಗುರುತಿಸಿಕೊಳ್ಳಲು ಸಾಧ್ಯ ಎಂದು ಹಿರಿಯೂರು ತಾಲೂಕು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ಹೇಳಿದರು.ಶ್ರೀಗಳು ಹಳೇನಗರದ ಬಸವೇಶ್ವರ ವೃತ್ತದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ನೂತನ ವಾಗಿ ಅಸ್ತಿತ್ವಕ್ಕೆ ಬಂದಿರುವ ತಾಲೂಕು ಮಾದಿಗ ಸಮಾಜದ ಉದ್ಘಾಟನೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡತನದಲ್ಲಿ ಹುಟ್ಟಿ ಬೆಳೆದ ಬಾಲಕನೊಬ್ಬ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿನ ಮೂಲಕ ಇಡೀ ವಿಶ್ವಕ್ಕೆ ಪರಿಚಯವಾಗಿದ್ದು, ವಿದ್ಯೆಯ ಕಾರಣದಿಂದ ಹೊರತು ಶ್ರೀಮಂತಿಕೆಯ ಕಾರಣದಿಂದಲ್ಲ. ಆದ್ದರಿಂದ ಮಾದಿಗ ಸಮಾಜ ವಿದ್ಯೆಯ ಮಹತ್ವ ತಿಳಿಯಬೇಕು ಎಂದರು.ಕೆಳಸ್ತರದ ವ್ಯಕ್ತಿ ಬರೆದ ಸಂವಿಧಾನ ಎಲ್ಲಾ ಸ್ತರದವರಿಗೂ ಅನ್ವಯವಾಗಲು ಸಂವಿಧಾನದಲ್ಲಿ ಅಡಕವಾಗಿರುವ ಬದುಕಿನ ಶಕ್ತಿಯ ತಿರುಳು ಅಡಕವಾಗಿರುವುದೇ ಕಾರಣ ಎಂದರು.
ಸಮಾಜ ವೇಗವಾಗಿ ಮುನ್ನುಗ್ಗುತ್ತಿರುವ ಇಂದಿನ ಆಧುನಿಕ ಯುಗದ ಸಂದರ್ಭದಲ್ಲಿ ಮಾದಿಗ ಸಮಾಜ ಇನ್ನೂ ಕುಳಿತಸ್ಥಿತಿ ಯಲ್ಲಿದೆ. ನಿಲ್ಲಲೂ ಆಗದ ಈ ಸಮಾಜ ಇನ್ನು ಓಟ ಆರಂಭಿಸುವುದು ಯಾವಾಗ ಎಂದು ಪ್ರಶ್ನಿಸಿದರು.ಒಂದು ಸಮಾಜ ಒಂದು ಕುಟುಂಬದ ರೀತಿ. ಇದೊಂದು ದೊಡ್ಡ ಜವಾಬ್ದಾರಿ. ಟೀಕೆಗಳನ್ನು ಸಹಿಸಿಕೊಂಡು, ಎಲ್ಲರ ಹಿತ ನನ್ನ ಜವಾಬ್ದಾರಿ ಎಂದು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವವರು ಮಾತ್ರ ನಾಯಕರಾಗಲು ಅರ್ಹರು. ಐಕ್ಯತೆ ಸಾಧಿಸುವ ಕಾರಣ ಸಮಾಜದ ಸಂಘಟನೆ ಅತಿ ಮುಖ್ಯ. ಮಾದಿಗ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿದೆ. ಇಂತಹ ಸಮಾಜ ಬೆಳಕಿಗೆ ಬರಲು ಸಾಧ್ಯವೆ ಎಂದರು.
ಮೂಲಭೂತ ಸೌಕರ್ಯಗಳಿಲ್ಲದೆ ಯಾವ ಮನುಷ್ಯನೂ ಜೀವನ ನಡೆಸಲು ಸಾಧ್ಯವಿಲ್ಲ. ಅದೇ ರೀತಿ ಸಮಾಜದ ಪ್ರಗತಿಗಾಗಿ ಸಮಾಜದ ಕಾರ್ಯಾಲಯ ಮತ್ತು ಅಗತ್ಯ ಸೌಲಭ್ಯಗಳಂತಹ ಮೂಲ ಸೌಕರ್ಯಗಳನ್ನು ಹೊಂದುವುದು ಅಗತ್ಯ. ಸಮಾಜ ಮತ್ತು ಸಂಘಟನೆ ಪೂರಕ. ಕೊಂಕು ಮಾತುಗಳನ್ನು ಸಹಿಸಿಕೊಳ್ಳುವ ಗುಣ ಸಮಾಜದ ನಾಯಕರಿಗಿರಬೇಕು ಎಂದು ತಿಳಿಸಿದರು.ಸಮಾಜದ ಅಧ್ಯಕ್ಷ ಡಾ.ಎಸ್.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಸಮಾಜದ ಗೌರವಾಧ್ಯಕ್ಷ ಮಾರುತಿ, ಗೌರವ ಸಲಹೆಗಾರ ಎಸ್. ಮಂಜುನಾಥ್, ಕಾರ್ಯಾಧ್ಯಕ್ಷ ಬಿ.ಎ.ಮಂಜುನಾಥ್, ಉಪಾಧ್ಯಕ್ಷರಾದ ಶಿವಲಿಂಗಯ್ಯ, ಮೈಲಾರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಸಿ.ಕಾಂತರಾಜ್, ಖಜಾಂಚಿ ಅಣ್ಣಪ್ಪ, ಸಹ ಕಾರ್ಯದರ್ಶಿ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಹರೀಶ್, ಎನ್. ಶಿವಲಿಂಗಪ್ಪ, ಮಹೇಶ್, ಮಂಜುಳ ಸೇರಿದಂತರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸೀಗೆಬಾಗಿ ರಾಜೀವ್‌ಗಾಂಧಿ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್. ಹನುಮಂತಪ್ಪ ಡಾ. ಬಿ.ಆರ್.ಅಂಬೇಡ್ಕರ್‌ರವರ ಜೀವನ ಚರಿತ್ರೆ ಕುರಿತು ಹಾಗೂ ಸಹಾಯಕ ಪ್ರಾಧ್ಯಾಪಕ ಸಿ.ಪ್ರಭಾಕರ್ ಬಾಬು ಜಗಜೀವನ್ ರಾಂರವರ ಜೀವನ ಕುರಿತು ಉಪನ್ಯಾಸ ನೀಡಿದರು.ಶುಭ ಪ್ರಾರ್ಥಿಸಿ ಸಂಪತ್ ಕುಮಾರ್ ಸ್ವಾಗತಿಸಿದರು. ಕಾವ್ಯ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
;Resize=(128,128))
;Resize=(128,128))