ಉಡುಪಿ ಡಿವೈಎಸ್ಪಿ ವಿರುದ್ಧ ಅಂಬೇಡ್ಕರ್ ಯುವಸೇನೆ ಪ್ರತಿಭಟನೆ

| Published : Sep 09 2024, 01:39 AM IST

ಸಾರಾಂಶ

ಅಜ್ಜರಕಾಡು ಹುತಾತ್ಮ ಯೋಧರ ಸ್ಮಾರಕ ಬಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣವನ್ನು ದುರ್ಬಲಪಡಿಸುತ್ತಿದ್ದಾರೆಂದು ಆರೋಪಿಸಿ, ಡಿವೈಎಸ್ಪಿ ಪ್ರಭು ಅವರನ್ನು ಅಮಾನತುಗೊಳಿಸುವಂತೆ ಅಂಬೇಡ್ಕರ್ ಯುವಸೇನೆ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ಹಲವು ಸಾಧನೆಗಳ ಕಿರೀಟಗಳನ್ನು ತೊಟ್ಟ ಉಡುಪಿ ಜಿಲ್ಲೆಯಲ್ಲಿ ದಲಿತರ ಅಟ್ರಾಸಿಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಪೊಲೀಸ್ ಅಧಿಕಾರಿಗಳಿಗೆ ದಲಿತರು ಹೆದರುವುದಿಲ್ಲ ಎಂದು ದಲಿತ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.ಅವರು ನಗರದ ಅಜ್ಜರಕಾಡು ಹುತಾತ್ಮ ಯೋಧರ ಸ್ಮಾರಕ ಬಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ಪ್ರಕರಣವನ್ನು ದುರ್ಬಲಪಡಿಸುತ್ತಿದ್ದಾರೆಂದು ಆರೋಪಿಸಿ, ಡಿವೈಎಸ್ಪಿ ಪ್ರಭು ಅವರನ್ನು ಅಮಾನತುಗೊಳಿಸುವಂತೆ ಅಂಬೇಡ್ಕರ್ ಯುವಸೇನೆ ಜಿಲ್ಲಾ ಘಟಕ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.ದೌರ್ಜನ್ಯಕ್ಕೆ ಒಳಗಾದವರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ, ಪ್ರಕರಣಕ್ಕೆ ಸಿ.ಸಿ.ಟಿವಿ ದ್ರಶ್ಯಾವಳಿ ಮತ್ತು ಇತರರು ಸಾಕ್ಷಿ ನುಡಿದಿದ್ದರೂ, ನ್ಯಾಯಾಲಯವೇ ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದರೂ, ಪ್ರಕರಣಕ್ಕೆ ಸರಿಯಾದ ಸಾಕ್ಷಾಧಾರವಿಲ್ಲ ಎಂದು ಬಿ ರಿಪೋಟ್ ಹಾಕಿರುವುದರ ಹಿಂದೆ ಪೊಲೀಸ್ ಅಧಿಕಾರಿಗಳು ಆರೋಪಿಗಳಿಂದ ಆಮಿಷಕ್ಕೆ ಒಳಗಾಗಿದ್ದಾರೆ ಎಂದು ಜಯನ್ ಆರೋಪಿಸಿದರು.ಬಾಯಲ್ಲಿ ಅಂಬೇಡ್ಕರ್, ಸಂವಿಧಾನ, ಬುದ್ಧನ ಬಗ್ಗೆ ಮಾತನಾಡುತ್ತಾ ಹಿಂದಿನಿಂದ ದಲಿತರ ಬೆನ್ನಿಗೆ ಚೂರಿ ಹಾಕುವ ಇಂತಹ ಅಧಿಕಾರಿಗಳನ್ನು ತಕ್ಷಣ ಸರ್ಕಾರ ಸೇವೆಯಿಂದ ವಜಾಗೊಳಿಸಬೇಕು ಎಮದು ಆಗ್ರಹಿಸಿದರು.ಬಹುತೇಕ ಉಡುಪಿ ಜಿಲ್ಲೆಯಲ್ಲಿ ದಲಿತ ಅಧಿಕಾರಿಗಳಿಂದ ಮತ್ತು ಸರ್ಕಾರಿ ನೌಕರರಿಂದಲೇ ದಲಿತರಿಗೆ ಅನ್ಯಾಯವಾಗುತ್ತಿದೆ. ಮೇಲ್ಜಾತಿಯ ಅಧಿಕಾರಿಗಳು ತಾಳ್ಮೆಯಿಂದ ಸ್ಪಂದಿಸಿ ಕೆಲಸಮಾಡಿಕೊಟ್ಟರೂ, ದಲಿತ ಅಧಿಕಾರಿಗಳು ಮತ್ತು ನೌಕರರೇ ಮೀಸಲಾತಿಯ ಲಾಭ ಪಡೆದು ಬಡ ದಲಿರಿಗೆ ದೌರ್ಜನ್ಯ, ದಬ್ಬಾಳಿಕೆಯಿಂದ ವರ್ತಿಸುತ್ತಿದ್ದಾರೆಂದು ಜಯನ್ ಮಲ್ಪೆ ಆರೋಪಿಸಿದರು.ಕಾಂಗ್ರೆಸ್ ನಾಯಕ ಉದ್ಯಾವರ ನಾಗೇಶ್ ಮಾತನಾಡಿ, ದಲಿತರ ಪರ ನ್ಯಾಯವಿದ್ದರೂ ಬೀದಿಯಲ್ಲಿ ನಿಂತು ಪ್ರಜಾಪ್ರಭುತ್ವ ರಕ್ಷಕರಿಗೆ ದಿಕ್ಕಾರ ಕೂಗುವ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ. ಆರೋಪಿಗಳ ಪರ ಪೊಲೀಸ್ ಉಪಧೀಕ್ಷರು ಶಾಮಿಲಾಗಿರವುದು ಖಂಡನಾರ್ಹ ಎಂದರು.

ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು, ದಲಿತ ಹೋರಾಟಗಾರ್ತಿ ಸುಂದರಿ, ಕಾಂಗ್ರಸ್ ಮುಖಂಡ ಪ್ರಖ್ಯಾತ್ ಶೆಟ್ಟಿ, ಕೃಷ್ಣ ಬಂಗೇರ, ಅನಂತ ನಾಯ್ಕ ಮುಂತಾದವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ಯುವಸೇನೆಯ ಹರೀಶ್ ಸಾಲ್ಯಾನ್, ಯುವರಾಜ್ ಪುತ್ತೂರು, ರವಿರಾಜ್, ಭಗವಾನ್, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಸತೀಶ್ ಮಂಚಿ, ಸುರೇಶ್ ಚಿಟ್ಪಾಡಿ, ಸಂಧ್ಯಾ ತಿಲಕ್‌ರಾಜ್, ಸರಸ್ವತಿ ಕಿನ್ನಿಮುಲ್ಕಿ, ಅರುಣ್ ಸಲ್ಯಾನ್, ವಿನಯ ಕೊಡಂಕೂರು, ಮೀನಾಕ್ಷಿ ಮಾಧವ ಬನ್ನಂಜೆ, ದೀಪಕ್ ಕೋಟ್ಯಾನ್, ಅಹಮದ್ ಉಡುಪಿ, ಪ್ರಥ್ವಿರಾಜ್ ಶೆಟ್ಟಿ, ಸತೀಶ್ ನಾಯ್ಕ, ಶರತ್ ಶೆಟ್ಟಿ, ಕುಸುಮ ಗುಜ್ಜರಬೆಟ್ಟು, ಸಜ್ಜನ್ ಶೆಟ್ಟಿ, ಪದ್ಮನಾಭ ಕಲ್ಮಾಡಿ, ವೆಂಕಟೇಶ್, ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.