ಅಂಬೇಡ್ಕರ್‌ರಿಂದ ವಿಶ್ವವೇ ಮೆಚ್ಚುವ ಸಂವಿಧಾನ ಅರ್ಪಣೆ: ದಲಿತ ಮುಖಂಡ ವೆಂಕಟರಮಣಸ್ವಾಮಿ

| Published : Nov 28 2024, 12:34 AM IST

ಅಂಬೇಡ್ಕರ್‌ರಿಂದ ವಿಶ್ವವೇ ಮೆಚ್ಚುವ ಸಂವಿಧಾನ ಅರ್ಪಣೆ: ದಲಿತ ಮುಖಂಡ ವೆಂಕಟರಮಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್‌ ಅವರು ತಮ್ಮ ಸಂಕಷ್ಟದ ನಡುವೆಯೂ ಪ್ರಪಂಚದಲ್ಲಿ 7ನೇ ಸ್ಥಾನ ಹೊಂದಿರುವ ಭಾರತದಂತಹ ಬೃಹತ್‌ ರಾಷ್ಟ್ರಕ್ಕೆ ವಿಶ್ವವೇ ಮೆಚ್ಚುವ ಸಂವಿಧಾನ ಬರೆದು ಲೋಕಾರ್ಪಣೆ ಮಾಡಿದ್ದಾರೆ ಎಂದು ಅಂಬೇಡ್ಕರ್ ಪುರಸ್ಕೃತ, ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಅಭಿಪ್ರಾಯಪಟ್ಟರು. ಚಾಮರಾಜನಗರದಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.

ಮಾನಸ-ಸಿಕ್ರಂ ಸಂಸ್ಥೆಯಿಂದ ಸಂವಿಧಾನ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಂಬೇಡ್ಕರ್‌ ಅವರು ತಮ್ಮ ಸಂಕಷ್ಟದ ನಡುವೆಯೂ ಪ್ರಪಂಚದಲ್ಲಿ 7ನೇ ಸ್ಥಾನ ಹೊಂದಿರುವ ಭಾರತದಂತಹ ಬೃಹತ್‌ ರಾಷ್ಟ್ರಕ್ಕೆ ವಿಶ್ವವೇ ಮೆಚ್ಚುವ ಸಂವಿಧಾನ ಬರೆದು ಲೋಕಾರ್ಪಣೆ ಮಾಡಿದ್ದಾರೆ ಎಂದು ಅಂಬೇಡ್ಕರ್ ಪುರಸ್ಕೃತ, ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಅಭಿಪ್ರಾಯಪಟ್ಟರು.

ತಾಲೂಕಿನ ಭೋಗಾಪುರ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಮಾನಸ-ಸಿಕ್ರಂ ಸಂಸ್ಥೆ, ಭೋಗಾಪುರ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್‌ ಅವರು ತಮ್ಮ ಕುಟುಂಬದವರನ್ನು ಕಳೆದುಕೊಂಡ ನೋವಿನ ನಡುವೆಯೂ ಎದೆಗುಂದದೇ ಪ್ರಪಂಚದ ನಾನಾದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತ ದೇಶದ ಅಭಿವೃದ್ದಿಗೆ ಪೂರಕವಾದ ಸುಭದ್ರ ಸಂವಿಧಾನ ರಚನೆ ಮಾಡಿ, ದೇಶಕ್ಕೆ ಅರ್ಪಣೆ ಮಾಡಿದ್ದಾರೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲೇ ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಭೋಗಾಪುರ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಲಯವು ಉದ್ಘಾಟನೆಯಾಗಿಲ್ಲ. ಇದರಿಂದ ಕಾಲೇಜಿನ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ತೊಂದರೆಯಾಗಿದೆ. ಕೂಡಲೇ ಸಮಾಜ ಕಲ್ಯಾಣ ಸಚಿವರು ವಿದ್ಯಾರ್ಥಿನಿಲಯದ ಉದ್ಘಾಟನೆಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ಸಾಂವಿಧಾನಿಕ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸಿದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಲಿದೆ. ಸಂವಿಧಾನದಡಿಯಲ್ಲಿ ನಡೆದಾಗ ಪ್ರತಿಯೊಬ್ಬರು ಸಾಗಿದಾಗ ಉತ್ತಮ ಜೀವನ ನಡೆಸಬಹುದಾಗಿದೆ ಎಂದರು.

ಮಾನಸ-ಸಿಕ್ರಂ ಸಂಸ್ಥೆ ಜಿಲ್ಲಾ ಸಂಯೋಜಕ ಕೆ.ಸಿ.ರೇವಣ್ಣ ಮಾತನಾಡಿ, ಕಳೆದ 25 ವರ್ಷಗಳಿಂದ ನಮ್ಮ ಸಂಸ್ಥೆಯಿಂದ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಸಿದ್ದಾರ್ಥ ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಸಿ.ರಂಗಸ್ವಾಮಿ ಸಂವಿಧಾನ ಪೀಠಿಕೆ ಭೋದಿಸಿದರು. ಜನಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಕುದೇರು ಎಎಸ್‌ಐ ಚಂದ್ರಶೇಖರ್, ನಾಗನಾಯಕ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.