ಶಿವರಾಮೇಗೌಡರ ಹೇಳಿಕೆಗಳನ್ನು ಖಂಡಿಸಿ ಅವರ ವಿರುದ್ಧವಾಗಿ ಪ್ರತಿಭಟನೆ ಮಾಡಲು ಅಂಬರೀಶ್ ಅಭಿಮಾನಿಗಳು ಸಭೆ ಕರೆದು ಮಾತನಾಡಿದ್ದು, ಅಭಿಮಾನಿಗಳಿಗೆ ಕ್ಷಮೆಯಾಚಿಸದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಹಿರಿಯ ನಟ, ಮಾಜಿ ಸಚಿವ ದಿ.ಡಾ.ಅಂಬರೀಶ್ ಹಾಗೂ ಜಿಲ್ಲೆಯ ಹಿರಿಯ ರಾಜಕಾರಣಿಗಳ ವಿರುದ್ಧ ಏಕವಚನದಲ್ಲಿ ಮಾತನಾಡಿ ನಿಂದಿಸಿರುವ ಮಾಜಿ ಸಂಸದ ಶಿವರಾಮೇಗೌಡ ಕೂಡಲೇ ಅಂಬರೀಶ್ ಹಾಗೂ ಅಭಿಮಾನಿಗಳ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮುಟ್ಟನಹಳ್ಳಿ ಮಹೇಂದ್ರ ಎಚ್ಚರಿಸಿದರು.ಕೆ.ಎಂ.ದೊಡ್ಡಿ ಡಾ.ಅಂಬರೀಷ್ ಅಭಿಮಾನಿಗಳ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್.ಆರ್. ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಜೆಡಿಎಸ್ ಕಾರ್ಯಕರ್ತನೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ ಮಾತಿನ ಭರದಲ್ಲಿ ಅಂಬರೀಷ್ ವಿರುದ್ಧ ವಾಗ್ದಾಳಿ ಮಾಡಿರುವುದನ್ನು ಖಂಡಿಸಿದರು.
ಶಿವರಾಮೇಗೌಡರ ಆಕ್ಷೇಪಾರ್ಹ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಜೆಡಿಎಸ್ ಕಾರ್ಯಕರ್ತನೊಬ್ಬ ದೂರವಾಣಿ ಸಂಭಾಷಣೆ ವೇಳೆ ಅಶ್ಲೀಲ ಹಾಗೂ ಅವಾಚ್ಯ ಪದಗಳನ್ನು ಬಳಸಿ ಅಂಬರೀಶ್, ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಹಿರಿಯ ಮುಖಂಡರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಶಿವರಾಮೇಗೌಡರ ಹೇಳಿಕೆಗಳನ್ನು ಖಂಡಿಸಿ ಅವರ ವಿರುದ್ಧವಾಗಿ ಪ್ರತಿಭಟನೆ ಮಾಡಲು ಅಂಬರೀಶ್ ಅಭಿಮಾನಿಗಳು ಸಭೆ ಕರೆದು ಮಾತನಾಡಿದ್ದು, ಅಭಿಮಾನಿಗಳಿಗೆ ಕ್ಷಮೆಯಾಚಿಸದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜು, ಮೆಡಿಕಲ್ ಸ್ಟೋರ್ ಶಶಿಕುಮಾರ್, ಡಿ.ಎ.ಕೆರೆ ರಘು, ಎಂ.ಸಿ.ರವಿ, ಚಿಕ್ಕಸ್ವಾಮಿಚಾರಿ ಹಾಗೂ ಸಿದ್ದೇಗೌಡ ಇತರರು ಹಾಜರಿದ್ದರು.