ಸಾರಾಂಶ
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ । ಅಂಬಿಗರ ಚೌಡಯ್ಯ ಜಯಂತಿಕನ್ನಡಪ್ರಭ ವಾರ್ತೆ ಹಾಸನ
೧೨ನೇ ಶತಮಾನದಲ್ಲಿದ್ದ ಅಂಬಿಗರ ಚೌಡಯ್ಯ ಅವರ ಆದರ್ಶ ಹಾಗೂ ಮೌಲ್ಯಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಅನ್ವಯವಲ್ಲ, ಇಡೀ ಸಮಾಜದ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ ತಿಳಿಸಿದರು.ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಶಿವ ಶರಣರಲ್ಲಿ ನಿಜವಾದ ಶರಣ ಅರ್ಥ ಹೇಳಿದರೆ ಅದು ಅಂಬಿಗರ ಚೌಡಯ್ಯ. ಅವರ ಆದರ್ಶಗಳು ಮೌಲ್ಯಗಳು ಗುಣಗಳನ್ನು ಗಂಗಾಮತ ಬೆಸ್ತರು ಈ ಸಮಾಜಕ್ಕೆ ಮಾತ್ರವಲ್ಲದೆ ಅಂಬಿಗರು ಎಲ್ಲಾ ಸಮುದಾಯಗಳಿಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಮಾತ್ರ ಈ ಸಮಾಜ ಉದ್ದಾರವಾಗುತ್ತದೆ. ನಮ್ಮ ಮಕ್ಕಳಿಗೆ ನಮ್ಮ ಕಸುಬುಗಳನ್ನು ಮನೆಯಲ್ಲಿ ಪರಿಸರದಲ್ಲಿ ಒಳ್ಳೆಯ ಉತ್ತಮವಾದ ಶಿಕ್ಷಣ ಕೊಡುವುದರ ಜತೆಗೆ ತಮ್ಮ ಕಸುಬುಗಳನ್ನು ಕಲಿಸಬೇಕು ಎಂದರು.
ಮಹಿಳಾ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಧ್ಯಾಪಕ ಯೋಗೇಶ್ ಅಗ್ರಹಾರ ಅವರು ಉಪನ್ಯಾಸದಲ್ಲಿ ಮಾತನಾಡಿ, ೯೦೪ನೇ ಜಯಂತಿಯನ್ನು ಜನಾಂಗದ ಕುಲಗುರು ಆಚರಿಸುತ್ತಿದ್ದು. ಆರ್ಥಿಕವಾಗಿ, ರಾಜಕೀಯವಾಗಿ ನಮ್ಮ ಜನಾಂಗ ಇನ್ನು ಸಬಲವಾಗಿರುವುದಿಲ್ಲ. ಎರಡು ಪ್ರಮುಖ ಘಟನೆಗಳು ಇವೆ. ವಚನಕ್ರಾಂತಿ, ಕಲ್ಯಾಣ ಕ್ರಾಂತಿ ಇವೆ. ೨೬೯ ವಚನಗಳನ್ನು ಅಂಬಿಗರ ಚೌಡಯ್ಯ ಅವರು ಬರೆದಿದ್ದಾರೆ. ಅಂಬಿಗರ ಚೌಡಯ್ಯ ನಮ್ಮ ಕುಲ ಗುರು, ಮೂಲಪುರುಷ, ೧೨ ವರ್ಷಗಳ ಹಿಂದೆಯೇ ನಮ್ಮ ಜನಾಂಗವನ್ನು ತಿದ್ದುವ ಕೆಲಸ ಮಾಡಿದರು. ಅನೇಕ ವಚನಗಳನ್ನು ರಚನೆ ಮಾಡಿದರು ಎಂದರು.‘ವಸ್ತು ಸ್ಥಿತಿಯನ್ನು ಜನರ ಮುಂದೆ ಇಟ್ಟರು. ಬೇರೆ ದೇಶದವರು ಇವರ ವಚನವನ್ನು ಓದುತ್ತಿದ್ದಾರೆ. ನಾವು ಕರ್ನಾಟಕದಲ್ಲಿ ೪೦ ಲಕ್ಷ ಜನಸಂಖ್ಯೆ ಇದ್ದರೂ ಸಂಘಟನೆಯ ಕೊರತೆ ಕಾಣುತ್ತಿದ್ದೇವೆ. ಅವರು ಎಂದು ಜಾತಿ ಭೇದ ಮಾಡಲಿಲ್ಲ. ಇದ್ದ ಜಾತಿ ಭೇದವನ್ನು ಹೋಗಲಾಡಿಸಲು ಮುಂದಾದರು. ಜಾತಿ ಭೇದ ಬಗ್ಗೆ ಕಟುವಾಗಿ ಟೀಕಿಸಿ ವಚನ ಬರೆದಿದ್ದದರು. ಯಾರು ಕೀಳು, ಮೇಲಲ್ಲ. ಅವರ ಕಾಯಕದಲ್ಲಿ, ನಾವು ಮಾಡುವ ಉತ್ತಮ ಕೆಲಸದಿಂದ ದೊಡ್ಡವರು ಆಗಬೇಕು ಎಂದು ಅಂದು ವಚನ ಕ್ರಾಂತಿ ಮಾಡಿದರು’ ಎಂದು ಹೇಳಿದರು.
ಶಿಕ್ಷಣದಿಂದ ಮಾತ್ರ ಜನಾಂಗವನ್ನು ಮುಂದೆ ತರಬಹುದು, ಅಂಬಿಗರ ಚೌಡಯ್ಯ ಪ್ರಾಧಿಕಾರ, ಪೀಠ ಪ್ರಾರಂಭಿಸಿ ಸರ್ಕಾರ ಗಮನ ನೀಡಿದೆ. ಮೊದಲು ನಮ್ಮಲ್ಲಿ ಕೀಳಿರಿಮೆ ಬಿಟ್ಟು ಎದ್ದೇಳಿ ಸಮಾಜದ ಉದ್ಧಾರಕ್ಕೆ ಎಂದು ಕರೆಕೊಡಬೇಕಾಗಿದೆ ಎಂದು ಕರೆ ನೀಡಿದರು.ಶಿರಸ್ತೇದಾರ ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ತಾರಾನಾಥ್, ರಾಜ್ಯ ಗಂಗಮತಸ್ಥರ ಸಂಘದ ಉಪಾಧ್ಯಕ್ಷ ಎಚ್.ಬಿ. ಗೋಪಾಲ್, ಜಿಲ್ಲಾ ಬೆಸ್ತರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಆರ್. ನಾಗರಾಜು, ಗಂಗಾ ಪರಮೇಶ್ವರಿ ಗಂಗಾ ಮಾಸ್ತರವರ ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ಉಪಸ್ಥಿತರಿದ್ದರು. ಸಮಾಜ ಸೇವಕ ಯದೀಶ್ ನಿರೂಪಿಸಿದರು.
ಹಾಸನ ನಗರದ ಕಲಾಭವನದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.