ಗಂಗಾಮತ ಕಬ್ಬಲಿಗ ಸಮಾಜವು 39 ವಿವಿಧ ಉಪ ಜಾತಿ ಹೆಸರಲ್ಲಿ ಹರಿದು ಹಂಚಿಹೋಗಿದೆ. ಅವರೆಲ್ಲರನ್ನೂ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಸೇರಿಸುವ ಉತ್ಸವ

ಕಾರಟಗಿ: ಹಾವೇರಿ ಜಿಲ್ಲೆಯ ಕಂಚಾರಗಟ್ಟಿಯ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ.14 ಮತ್ತು 15ರಂದು 10ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥ ಮಹಾರಥೋತ್ಸವ ನಡೆಯಲಿದೆ. ಜಿಲ್ಲೆಯ ಗಂಗಾಮತ, ಕಬ್ಬಲಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಅಂಬಿಗರ ಚೌಡಯ್ಯ ಭವನದಲ್ಲಿ ಶರಣ ಅಂಬಿಗರ ಚೌಡಯ್ಯ ಸಂಸ್ಕೃತಿ ಉತ್ಸವ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಗಂಗಾಮತ ಕಬ್ಬಲಿಗ ಸಮಾಜವು 39 ವಿವಿಧ ಉಪ ಜಾತಿ ಹೆಸರಲ್ಲಿ ಹರಿದು ಹಂಚಿಹೋಗಿದೆ. ಅವರೆಲ್ಲರನ್ನೂ ಅಂಬಿಗರ ಚೌಡಯ್ಯ ಗುರುಪೀಠದಲ್ಲಿ ಸೇರಿಸುವ ಉತ್ಸವವೂ ಇದಾಗಿದೆ. ಅಂಬಿಗರ ಚೌಡಯ್ಯರ 906ನೇ ಜಯಂತಿ, ಶಾಂತಮುನಿ ಸ್ವಾಮೀಜಿ 10ನೇ ಸ್ಮರಣೋತ್ಸವ, ಶಾಂತಭೀಷ್ಮ ಚೌಡಯ್ಯರ ಪೀಠಾರೋಹಣದ ದಶಮಾನೋತ್ಸವ ಹಾಗೂ ಚೌಡಯ್ಯನವರ ತೊಟ್ಟಿಲೋತ್ಸವ ಹಾಗೂ ಮೂಲ ಐಕ್ಕ ಮಂಟಪದ ಪೂಜೆ, ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ, ವಿಶೇಷವಾಗಿ ಪೀಠದ ಪಕ್ಕದಲ್ಲಿಯೇ ಹರಿಯುವ ತುಂಗಭದ್ರಾ ತಟದಲ್ಲಿ ಗಂಗಾರತಿ ಕಾರ್ಯಕ್ರಮ, ಚೌಡಯ್ಯನವರ ಶಿಲಾ ಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ನೂತನ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ, ರಕ್ತದಾನ ಶಿಬಿರ, ಸರಳ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಜನತೆ ಜಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಗುರುಪೀಠದ ಮಾಜಿ ಕಾರ್ಯಾಧ್ಯಕ್ಷ ಬಸವರಾಜ ಸಪ್ಪನಗೋಳ ಹಾಗೂ ಉಪಾಧ್ಯಕ್ಷ ಮಂಜುನಾಥ ಪುಟಗನಳ್ಳಿ ಹಾಗೂ ಅಯ್ಯಪ್ಪ ಸಂಗಟಿ ಮಾತನಾಡಿ, ಜಿಲ್ಲೆಯ ಸಮಾಜ ಬಾಂಧವರು, ತನು-ಮನ-ಧನ ಪೂರ್ವಕವಾಗಿ ದುಡಿದು, ಜಾತ್ರೆಯ ಯಶಸ್ಸಿಗೆ ಸಹಕರಿಸಬೇಕು ಎಂದರು.

ಈ ವೇಳೆ ಸಮಾಜದ ಕಾಶೀನಾಥ್ ಕಂಪ್ಲಿ, ಹನುಮಂತಪ್ಪ ಸಿಂಗಾಪುರ, ದೊಡ್ಡತಾಯಪ್ಪ ಕೋಟ್ಯಾಳ, ಸಣ್ಣಲಿಂಗಪ್ಪ ಬೇವಿನಾಳ, ರಾಮಣ್ಣ ಬಡಿಗೇರ್, ಮಹಾದೇವ ನವಲಿ, ವೆಂಕೋಬ ಮೂಲಿಮನಿ, ವೀರೇಶ ಕೋಟ್ಯಾಳ, ಸುನೀಲ್ ಮೂಲಿಮನಿ, ಹನುಮಂತಪ್ಪ ಕಾಗಿ, ಓಲೆಪ್ಪ ಹಗೇದಾಳ, ಬೂದಗುಂಪಾ ಗ್ರಾಮಸ್ಥರಾದ ರಮೇಶಕುಮಾರ ಬಾರಿಕೇರ್, ಬಸವರಾಜಪ್ಪ ಬಾರಿಕೇರ್, ಶರಣಪ್ಪ ಬಾರಿಕೇರ್, ಹನುಮಂತಪ್ಪ ಶಾಲಿಗನೂರು, ಬಸವರಾಜ ಕಕ್ಕರಗೋಳ, ಹನುಮಂತಪ್ಪ ಉಳೇನೂರು ಇನ್ನಿತರರು ಇದ್ದರು. ಧನಂಜಯ್ ಎಲಿಗಾರ್, ಶರಣಪ್ಪ ಸಂಗಟಿ ಕಾರ್ಯಕ್ರಮ ನಿರ್ವಹಿಸಿದರು.

ಗುರುಪೀಠ ರಾಜ್ಯದ ಗಂಗಾಮತಸ್ಥರ ಅಸ್ಮಿತೆ: ಶ್ರೀಗಳು

ರಾಜ್ಯಾದ್ಯಂತ 30ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಗಂಗಾಮತ ಕಬ್ಬಲಿಗರು ಇದ್ದರೂ 39 ಪರ್ಯಾಯ ಪದಗಳಲ್ಲಿ ಹರಿದು ಹಂಚಿಹೋಗಿರುವ ನಮ್ಮದು ಅಸಂಘಟಿತ ಸಮಾಜವಾಗಿದೆ. ಈ ಹಿಂದೆ ನದಿಗಳಲ್ಲಿ ಹರಿಗೋಲು ನಡೆಸಿಕೊಂಡು ಮೀನು ಹಿಡಿದು ಜೀವನ ಸಾಗಿಸುತ್ತಿದ್ದರು. ಆದರೆ, ಇತ್ತೀಚಿನ ದಶಕಗಳಲ್ಲಿ ಸೇತುವೆಗಳ ನಿರ್ಮಾಣ ಹಾಗೂ ಎಲ್ಲಾ HB ಸಮುದಾಯಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ಕಾರಣಕ್ಕೆ ನಮ್ಮವರು, ಕೆಲಸದಿಂದ ವಂಚಿತರಾಗಿದ್ದಾರೆ. ಆ ಕಾರಣಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಂಘಟನಾತ್ಮಕವಾಗಿ ಸಮಾಜ ಹಿಂದೆ ಉಳಿದುಕೊಂಡಿದೆ. ಆ ಕಾರಣಕ್ಕೆ ಕಳೆದ 10 ವರ್ಷಗಳಿಂದ ಗುರುಪೀಠದ ಮೂಲಕ ಸಮುದಾಯ ಸಂಘಟಿಸುವ ಕಾರ್ಯ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಈ ಜಾತ್ರೆ ನಮ್ಮ ಸಮುದಾಯದ ಅಸ್ಮಿತೆಯಾಗಿದೆ. ಎಲ್ಲ ಉಪ ಪಂಗಡ, ಎಸ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ಈ ಕಾರ್ಯಕ್ರಮ ಒಂದು ಬೃಹತ್ ವೇದಿಕೆಯಾಗಿದ್ದು, ನಾವು ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಎಂದು ಶ್ರೀಗಳು ಹೇಳಿದರು.