ಚೌಡಯ್ಯ ಇಡೀ ಮನುಕುಲಕ್ಕೆ ದಾರಿದೀಪ: ಸಚಿವ ಬೋಸರಾಜು

| Published : Jan 22 2024, 02:17 AM IST

ಚೌಡಯ್ಯ ಇಡೀ ಮನುಕುಲಕ್ಕೆ ದಾರಿದೀಪ: ಸಚಿವ ಬೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ಜಿಲ್ಲಾಡಳಿತದಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಇದೆ ಸಂದರ್ಭದಲ್ಲಿ ನಗರದಲ್ಲಿ ಚೌಡಯ್ಯ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಶರಣರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಹಾಗೂ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನಕ್ಕೆ ಸಾರ್ಥಕತೆ ಲಭ್ಯವಾಗುತ್ತದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಹೇಳಿದರು.

ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯ ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದವರು. ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರಾಗಿದ್ದರು.

ಗಂಗಾಮತಸ್ಥರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿದಾಗ ಮಾತ್ರ ಮಕ್ಕಳು ಮುಂದಿನ ದಿನಗಳಲ್ಲಿ ತಲೆ ಎತ್ತುವಂತಾಗುತ್ತದೆ. ಸಮಾಜದಲ್ಲಿ ಶಿಕ್ಷಣ ಅತ್ಯಂತ ಮುಖ್ಯವಾದದ್ದು ಎಂದು ತಿಳಿಸಿದರು.

ನಗರ ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಮಾತನಾಡಿ, ಅಂಬಿಗರ ಚೌಡಯ್ಯನವರು ಗಂಗಾಮತಸ್ಥ ಸಮಾಜದವರು ಮಾತ್ರವಲ್ಲದೆ ಪ್ರತಿಯೊಬ್ಬರು ಅವರ ಆರ್ದಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು. ಕೇವಲ ಜಯಂತಿಗೆ ಸೀಮಿತವಾಗಬಾರದು. ಸಮಾಜಕ್ಕೆ 30 ಗುಂಟೆ ಜಾಗ ನೀಡಿ ಗಂಗಾಮತಸ್ಥ ಭವನ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತದೆ ಎಂದರು.

ಸಿಂಧನೂರಿನ ಮಲ್ಲಿಕಾರ್ಜುನ.ಕೆ ಅವರು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಶಿವಕುಮಾರ, ತಹಸೀಲ್ದಾರ್ ಸುರೇಶ ವರ್ಮಾ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ, ಸಾಹಿತಿ ವೀರಹನುಮಾನ, ಸಮಾಜದ ಮುಖಂಡರಾದ ಕೆ.ಶಾಂತಪ್ಪ, ಕಲಮಲಾ ಶರಣಪ್ಪ, ಕಡಗೋಲ ಆಂಜನೇಯ್ಯ, ಕಡಗೋಲ ಶರಣಪ್ಪ ಸೇರಿ ಮಹಿಳೆಯರು,ಮಕ್ಕಳು,ಯುವಕರು, ಗಂಗಾಮತಸ್ಥ ಬಾಂಧವರು ಇದ್ದರು.ಅಂಬಿಗರ ಚೌಡಯ್ಯ ಭಾವಚಿತ್ರ ಅದ್ಧೂರಿ ಮೆರವಣಿಗೆ

ರಾಯಚೂರು: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ನಗರದ ಅಂಬಿಗರ ಚೌಡಯ್ಯ ವೃತ್ತದಲ್ಲಿ ಅಂಬಿಗರ ಚೌಡಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಸ್ಥಳೀಯ ಚೌಡಯ್ಯ ವೃತ್ತದಲ್ಲಿ ಸೇರಿದ ವಿವಿಧ ಮಠಗಳ ಸ್ವಾಮೀಜಿಗಳು, ಸಚಿವರು, ಶಾಸಕರು, ಅಧಿಕಾರಿಗಳು, ಸಮುದಾಯಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಚೌಡಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸಿದರು. ನಂತರ ಆರಂಭಗೊಂಡ ಮೆರವಣಿಗೆ ಮುಖ್ಯರಸ್ತೆ, ವೃತ್ತ, ಬಡಾವಣೆ ಮುಖಾಂತರ ರಂಗಮಂದಿರದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಗಂಗಾಮತಸ್ಥ ಸಮಾಜದ ಯುವಕರು ಹಲ್ಲಿನಿಂದ ಕಾರನ್ನು ಎಳೆದು ಗಮನ ಸೆಳೆದರು.