ಸಾರಾಂಶ
ಶಿಗ್ಗಾಂವಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಸಿರುವುದನ್ನು ಖಂಡಿಸಿ ತಾಲೂಕು ಗಂಗಾಮತ ಸಮಾಜವು ತಾಲೂಕಿನ ಇತರ ಸಮಾಜದ ಮುಖಂಡರ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟಿಸಿ ಮೂಲಕ ತಹಸೀಲ್ದಾರ ಯಲ್ಲಪ್ಪ ಗೋಣೆನ್ನವರ ಮೂಲಕ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು.ಪಟ್ಟಣದ ರಾಣಿಚನ್ನಮ್ಮ ವೃತ್ತದಲ್ಲಿ ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸಿ ಮಾತನಾಡಿ, ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕೆಲ ಕಿಡಿಗೇಡಿಗಳು ಭಗ್ನಗೊಳಿಸಿದ್ದು ಖಂಡನೀಯ. ತಪ್ಪಿತಸ್ಥರನ್ನು ತಕ್ಷಣದಲ್ಲಿಯೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಈ ಕೃತ್ಯವು ನಾಡಿನ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಾಗಿದ್ದು, ರಾಜ್ಯದ ಇಡೀ ಸಮಾಜ ಖಂಡಿಸುತ್ತಿದೆ. ಸಮಾಜದ ಶಾಂತಿಯನ್ನು ಕದಡಿದವರನ್ನು ಪೊಲೀಸರು ಕೂಡಲೆ ಪತ್ತೆಮಾಡಿ ಬಂಧಿಸಬೇಕು. ಕರ್ನಾಟಕ ಸರ್ಕಾರ ಮುಂದಿನ ದಿನಗಳಲ್ಲಿ ಇಂತಹ ಸಮಾಜ ಘಾತುಕ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಸೂಚಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಹೇಳಿದರು.
ಸಮಾಜದ ಮುಖಂಡ ದೇವರಾಜ ಸುಣಗಾರ ಮಾತನಾಡಿ, ಜನಪದ ಮೂಲದಿಂದ ಬೆಳೆದುಬಂದ ನಮ್ಮ ಸಂಸ್ಕೃತಿಗೆ ೧೨ನೇ ಶತಮಾನದ ಶರಣರು ಭಾವೈಕ್ಯತೆಯ ಶರಣಸಂಸ್ಕೃತಿಯನ್ನು ಕಟ್ಟಿಕೊಟ್ಟು ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಮಾಡಿದ್ದರು. ಅಂತ ಶರಣ ಪರಂಪರೆಯಲ್ಲಿ ನಿಜಶರಣ ಎಂದೇ ಕರೆಯಿಸಿಕೊಂಡ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಕಿಡಗೇಡಿಗಳು ಭಗ್ನಗೊಳಿಸುವ ಘನಗೋರ ಕೃತ್ಯವನ್ನು ಮಾಡಿದ್ದಾರೆ. ಈ ಘಟನೆ ಶರಣ ಪರಂಪರೆಯನ್ನು ತನ್ನ ಜೀವನ ಪದ್ದತಿಯನ್ನಾಗಿಸಿಕೊಂಡು ಬಂದಿರುವ ಎಲ್ಲ ಸಮಾಜಗಳ ಬಾಂಧವರಿಗೆ ನೋವನ್ನುಂಟು ಮಾಡಿದೆ. ಸರ್ಕಾರ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ತಿಪ್ಪಣ್ಣ ಸಾತಣ್ಣನವರ, ಮಂಜುನಾಥ ಬ್ಯಾಹಟ್ಟಿ, ಅಶೋಕ ಕಾಳೆ, ನಿಂಗಪ್ಪ ಹೊಸಪೇಟಿ, ಪುಟ್ಟಪ್ಪ ಕಟ್ಟಿಮನಿ, ಹೊನ್ನಪ್ಪ ಹಾಳಿ, ಮರಿತಿಮ್ಮಪ್ಪ ಮತ್ತಿಗಟ್ಟಿ, ವಾಸುದೇವ ಮತ್ತಿಗಟ್ಟಿ, ನಾಗಪ್ಪ ಓಲೆಕಾರ, ರಮೇಶ ಹೊಸಪೇಟಿ, ಚನ್ನಪ್ಪ ಶ್ಯಾಡಂಬಿ, ನಾಗರಾಜ ನಾಡಿಗೇರ, ಮುದಕಣ್ಣ ಹೊಸಪೇಟಿ, ರಾಮಣ್ಣ ಅಂದಲಗಿ, ಲಕ್ಷ್ಮಣ ಸುಣಗಾರ, ರುದ್ರಪ್ಪ ಬಂಕಾಪುರ, ಅರ್ಜುನಪ್ಪ ಬಾರಿಕೇರ, ಫಕೀರೇಶ ಮಸ್ತಿ, ಗಿರೀಶ ಕರ್ಜಗಿ, ಮಂಜು ಬಾರಕೇರ ಇತರರಿದ್ದರು.ಪ್ರತಿಭಟನಾ ಮೆರವಣಿಗೆಶಿಗ್ಗಾಂವಿ ಗಾಂಧಿನಗರದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಶಿವಾನಂದ ಮ್ಯಾಗೇರಿ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಪ್ರತಿಭಟನಾ ಮೆರವಣಿಗೆ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಸಿ ತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸುವ ಮೂಲಕ ಅಂತ್ಯಗೊಂಡಿತು.