ಹಾವೇರಿ ತಾಲೂಕಿನ ಸುಕ್ಷೇತ್ರ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ. 14 ಮತ್ತು 15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನಗ್ರಂಥ ಮಹಾರಥೋತ್ಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು.
ಹಾವೇರಿ: ತಾಲೂಕಿನ ಸುಕ್ಷೇತ್ರ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ. 14 ಮತ್ತು 15ರಂದು ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನಗ್ರಂಥ ಮಹಾರಥೋತ್ಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.14ರಂದು ಬೆಳಗ್ಗೆ 6ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವ, ಬೆಳಗ್ಗೆ 8 ಗಂಟೆಗೆ ಚೌಡಯ್ಯನವರ ಐಕ್ಯಮಂಟಪದ ಪೂಜೆ, 10 ಗಂಟೆಗೆ ಸಾಮೂಹಿಕ ರಕ್ತದಾನ ಶಿಬಿರ, 11 ಗಂಟೆಗೆ ಸಾಮೂಹಿಕ ವಿವಾಹ ಹಾಗೂ ಲಿಂ.ಶಾಂತಮುನಿ ಶ್ರೀಗಳವರ 10ನೇ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರಸ್ತುತ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಜತೆಗೆ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ. ಸಂಜೆ 7ಕ್ಕೆ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಜ.15ರಂದು ಬೆಳಗ್ಗೆ 8ಕ್ಕೆ ಧರ್ಮ ಧ್ವಜಾರೋಹಣ, ನಂತರ ಧರ್ಮಸಭೆ ನಡೆಯಲಿದೆ. ಇದೇ ವೇಳೆ ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ 5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾದ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ, ಮಧ್ಯಾಹ್ನ 12ಕ್ಕೆ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಪೀಠಾರೋಹಣದ ದಶಮಾನೋತ್ಸವ ಸಮಾರಂಭ ನಡೆಯಲಿದೆ. ಸಂಜೆ 5ಕ್ಕೆ ವಚನ ಗ್ರಂಥ ಮಹಾರಥೋತ್ಸವ ಜರುಗಲಿದೆ. ಈ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದೇರಿದಂತೆ ರಾಜಕೀಯ ಧುರೀಣರನ್ನು ಆಹ್ವಾನಿಸಲಾಗಿದೆ ಎಂದರು.ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ, ಗೌರವಾಧ್ಯಕ್ಷ ಮಂಜುನಾಥ ಭೋವಿ, ಮುಖಂಡರಾದ ಬಸವರಾಜ ಕಳಸೂರ, ಕೃಷ್ಣಮೂರ್ತಿ ವಡ್ನಿಕೊಪ್ಪ, ಶಂಕರ ಸುತಾರ, ಕರಬಸಪ್ಪ ಹಳದೂರ, ದೇವರಾಜ ಸುಣಗಾರ, ಪ್ರಕಾಶ ಅಂಬಿಗೇರ, ಎನ್.ಎಂ ಶೇಷಗಿರಿ, ಕೊಟ್ರೇಶ್ ಪೂಜಾರ, ಮಂಜುನಾಥ ಪುಟಗನಾಳ, ಅಣ್ಣಪ್ಪ ಚಾಕಾಪುರ, ರಾಜು ಜಾಡಮಲ್ಲಿ, ಹೊನ್ನಪ್ಪ ಸೇರಿದಂತೆ ಇತರರು ಇದ್ದರು.ವೀರಗಣಾಚಾರಿ ಪ್ರಶಸ್ತಿ: ಈ ಬಾರಿಯ ರಾಜ್ಯ ಮಟ್ಟದ ಅಂಬಿಗರ ಚೌಡಯ್ಯ ವೀರ ಗಣಾಚಾರಿ ಪ್ರಶಸ್ತಿಯನ್ನು ಮರಣೋತ್ತರವಾಗಿ ಕಲಬುರಗಿಯ ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ ಅವರಿಗೆ ನೀಡಲಾಗುತ್ತದೆ ಎಂದು ಶಾಂತಭೀಷ್ಮ ಶ್ರೀಗಳು ಮಾಹಿತಿ ನೀಡಿದರು.ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿನಲ್ಲಿ ಪ್ರಾಧಿಕಾರ ರಚಿಸುವುದರ ಜೊತೆಗೆ ಐಕ್ಯಮಂಟಪದ ಅಭಿವೃದ್ಧಿಗೆ ಕ್ರಮವಹಿಸಬೇಕು. ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮವಹಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಒತ್ತಾಯಿಸಲಾಗುತ್ತದೆ ಎಂದು ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.