ಸಾರಾಂಶ
ಕಂಪ್ಲಿ: ಅಂಬಿಗರು ಎಂದರೆ ನಂಬಿದವರನ್ನು ದಡ ಸೇರಿಸುವ ನಂಬಿಕಸ್ತ ಸಮಾಜದವರು ಎಂದು ನರಸೀಪುರದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಗುರುಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಶ್ರೀ ತಿಳಿಸಿದರು.ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಸಮುದಾಯದ ಪ್ರತಿಯೊಬ್ಬರ ಮನೆಯಲ್ಲಿ ಅಂಬಿಗರ ಚೌಡಯ್ಯನ ವಚನಗಳನ್ನು, ಗಂಗಾಮತೆಯ ಪುರಾಣವನ್ನು ಪಾರಾಯಣ ಮಾಡಬೇಕು. ವರ್ಷಕ್ಕೊಮ್ಮೆ ಅಂಬಿಗರ ಚೌಡಯ್ಯನ ಗದ್ದುಗೆ ಭೇಟಿ ನೀಡಿ ದರ್ಶನ ಪಡೆಯುವುದನ್ನು ರೂಢಿಸಿಕೊಳ್ಳಬೇಕು. ಸಮುದಾಯದ ಪ್ರತಿಯೊಬ್ಬರೂ ಸಂಘಟಿತರಾಗಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ, ಆರ್ಥಿಕವಾಗಿ ಸೇರಿ ನಾನಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕು. ಅನೇಕ ಹೋರಾಟಗಳನ್ನು ಮಾಡಿದರು ಇಂದು ನಮ್ಮ ಸಮುದಾಯಕ್ಕೆ ಎಸ್ಟಿ ಮೀಸಲಾತಿ ದೊರೆಯದಿರುವುದು ಅತ್ಯಂತ ಬೇಸರ ಸಂಗತಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಸಮುದಾಯದ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿಕೊಂಡರು.ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಸಭೆ ನಡೆಸಿ ಮೀಸಲಾತಿ ವಿಚಾರ ಕುರಿತು ಹೋರಾಟ ಮಾಡುವ ಕುರಿತು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.ಈ ಸಂದರ್ಭದಲ್ಲಿ ಶಾಸಕ ಜೆ.ಎನ್. ಗಣೇಶ್, ಗಂಗಾಮತ ಸಮಾಜದ ರಾಜ್ಯಾಧ್ಯಕ್ಷ ಬಿ.ಮೌಲಾಲಿ, ಅಂಬಿಗರ ಚೌಡಯ್ಯ ಮಹಾಸಭಾ ರಾಜ್ಯಾಧ್ಯಕ್ಷೆ ಅಂಬಿಕಾ ಜಾಲಗಾರ್, ಅಖಿಲ ಭಾರತ ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತ್ತಾತ್ರಯ್ಯ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಎಂ.ಆಶಾ, ಉಪಾಧ್ಯಕ್ಷ ಆರ್.ಎಂ. ರಾಮಯ್ಯ, ಪಿಐ ವಾಸುಕುಮಾರ್, ಮುಖಂಡರಾದ ತಳವಾರ್ ರಾಮಚಂದ್ರಪ್ಪ, ಎಚ್.ಶಿವಶಂಕರ್ ಗೌಡ, ಎಚ್.ಜಗನ್ನಾಥ ಗೌಡ, ಬಿ.ನಾರಾಯಣಪ್ಪ, ಎಚ್.ಶಿವಶರಣ, ಮಣ್ಣೂರುನಾಗರಾಜ್, ಕರೆಕಲ್ ಮನೋಹರ್, ಎಲಿಗಾರ್ ನಾಗರಾಜ, ಬಿ.ಸಿದ್ದಪ್ಪ, ರಾಮಸಾಗರದ ಶ್ರೀನಿಜ ಅಂಬಿಗರ ಚೌಡಯ್ಯ ಸಂಘದ ಪ್ರಮುಖರಾದ ಕೆ.ಶಿವಕುಮಾರ್, ಟಿ. ಗಿರೀಶ್, ರೇಣುಕಾರಾಜ್ ವಿವೇಕ್, ಸೂರಿ, ಚಂದ್ರ, ಬಿ.ಟಿ. ಶಿವಕುಮಾರ್, ಜಗದೀಶ್, ಗೋವಿಂದ ಶರಣಪ್ಪ, ಗೌರೀಶ್, ಕುಬೇರ್ ಇದ್ದರು.