ಐಟಿ ರೇಡ್‌ನಲ್ಲಿ ₹42 ಕೋಟಿ ಸಿಕ್ಕಿದ್ದ ಅಂಬಿಕಾಪತಿ ಹೃದಯಾಘಾತಕ್ಕೆ ಬಲಿ

| Published : Nov 28 2023, 12:30 AM IST

ಸಾರಾಂಶ

ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಿಧನ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾಗಿದ್ದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಆರ್. ಅಂಬಿಕಾಪತಿ (68) ಸೋಮವಾರ ನಿಧನರಾಗಿದ್ದಾರೆ.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ನಾಗವಾರದ ಮಾನ್ಯತಾ ಟೆಕ್‌ ಪಾರ್ಕ್‌ ಬಳಿಯ ನಿವಾಸದಲ್ಲಿ ಅಂಬಿಕಾಪತಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಒಂದು ವಾರದ ಹಿಂದೆ ಅಂಬಿಕಾಪತಿ ಪೈಲ್ಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸೋಮವಾರ ಸಹ ಆಸ್ಪತ್ರೆಗೆ ಹೋಗಿ ಬಂದಿದ್ದರು.

40 ವರ್ಷದಿಂದ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ಅಂಬಿಕಾಪತಿ ನಿವಾಸಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಸುಮಾರು 42 ಕೋಟಿ ರು. ನಗದು ಪತ್ತೆಯಾಗಿತ್ತು. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.

ಮೃತರಿಗೆ ಪತ್ನಿ ಮಾಜಿ ನಗರಸಭೆ ಸದಸ್ಯೆ ಅಶ್ವತ್ಥಮ್ಮ, ಒರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಂಗಳವಾರ ಆರ್‌.ಟಿ.ನಗರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮೃತರ ಆಪ್ತರು ತಿಳಿಸಿದ್ದಾರೆ.

ಅಂಬಿಕಾಪತಿ ಅಕಾಲಿಕ ನಿಧನಕ್ಕೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ಪ್ರಧಾನಕಾರ್ಯದರ್ಶಿ ಜಿ.ಎಂ. ರವೀಂದ್ರ ಸೇರಿದಂತೆ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.