ಸಾರಾಂಶ
ಧಾರವಾಡ: ವರಕವಿ ದ.ರಾ. ಬೇಂದ್ರೆ ಅವರ ಕಾವ್ಯನಾಮ ಅಂಬಿಕಾತನಯದತ್ತ ಹೆಸರಿನಲ್ಲಿ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಹಾಗೂ ಕವಿ, ವಿಮರ್ಶಕ, ಸಂಸ್ಕೃತಿ ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರಿಗೆ ಸಂದಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಬೇಂದ್ರೆ ಅವರ 129ನೇ ಜನ್ಮದಿನದ ಅಂಗವಾಗಿ ಜ. 31ರಂದು ಬೇಂದ್ರೆ ಭವನದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 1 ಲಕ್ಷ ಮೊತ್ತವಿದ್ದು ಇಬ್ಬರು ಹಂಚಿಕೊಂಡಿದ್ದಾರೆ. ಪ್ರಶಸ್ತಿ ಫಲಕ, ಫಲ-ಪುಷ್ಪಗಳನ್ನು ಒಳಗೊಂಡಿದೆ ಎಂದರು.
ನವೋದಯ ಸಾಹಿತ್ಯದ ಸ್ತ್ರೀ ಸಂವೇದನೆಯ ಸೃಜನಶೀಲ ಲೇಖಕಿ ಡಾ. ವೀಣಾ ಶಾಂತೇಶ್ವರ ಧಾರವಾಡದವರು. ಮಹಾತ್ಮ ಗಾಂಧಿ, ಅಂಬೇಡ್ಕರ್, ಲೋಹಿಯಾ ಹಾಗೂ ಕುವೆಂಪು ಅವರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ತುಮಕೂರು ಮೂಲದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರನ್ನು ಪ್ರಶಸ್ತಿ ಆಯ್ಕೆ ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದ್ದು, ಪ್ರದಾನ ದಿನ ಅವರ ಸಾಹಿತ್ಯದ ವಿಮರ್ಶೆ ಸಹ ಮಾಡಲಾಗುವುದು. ಜತೆಗೆ ನಾಡಿನ ಗಣ್ಯರಿಂದ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯ ಡಾ. ಕೃಷ್ಣಾ ನಾಯಕ ಹಾಗೂ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಹಾಗೂ ಪ್ರಕಾಶ ಬಾಳಿಕಾಯಿ ಇದ್ದರು.