ಸಾರಾಂಶ
ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರತುರ್ತು ಸಂದರ್ಭಗಳಲ್ಲಿ ರೋಗಿಗಳು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಬೇಗನೆ ಸಾಗಿಸಲು ಅವಶ್ಯವಿರುವ ಆರೋಗ್ಯ ಕವಚ- ೧೦೮ ಆ್ಯಂಬುಲೆನ್ಸ್‌ಗಳ ಕೊರತೆ ಪಟ್ಟಣದಲ್ಲಿ ತೀವ್ರವಾಗಿ ಕಾಡುತ್ತಿದೆ. ಸದ್ಯ ಖಾಸಗಿ ಏಜೆನ್ಸಿ ನಿರ್ವಹಿಸುತ್ತಿರುವ ೧೦೮ ಆ್ಯಂಬುಲೆನ್ಸ್‌ಗಳಿಗೆ ನಿರ್ವಹಣೆ ಕೊರತೆಯೂ ಎದುರಾಗಿದೆ.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ಆರೋಗ್ಯ ಕವಚ-೧೦೮ ಯೋಜನೆಯಡಿಯ ಒಟ್ಟು ೨ ಆ್ಯಂಬುಲೆನ್ಸ್‌ಗಳು ವಾಹನಗಳೂ ದುರಸ್ತಿಯಾಗದೇ ಕೆಟ್ಟು ನಿಂತಿವೆ. ಇದರಿಂದಾಗಿ ಆ್ಯಂಬುಲೆನ್ಸ್‌ಗಳಿಗೆ ರೋಗ ಹಿಡಿದಿದ್ದು, ಸದ್ಯ ಅವುಗಳ ಸೇವೆ ಸ್ಥಗಿತಗೊಂಡಿದೆ. ೧೦ರಿಂದ ೧೫ ಕಿಮೀ ವ್ಯಾಪ್ತಿಯಲ್ಲಿ ೧೫ ರಿಂದ ೨೦ ನಿಮಿಷಗಳಲ್ಲಿ ಆ್ಯಂಬುಲೆನ್ಸ್ ಸೇವೆ ನೀಡಬೇಕಿದೆ. ಆದರೆ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ, ಸಮೀಪದ ಆಸ್ಪತ್ರೆಗಳಲ್ಲಿನ ಆ್ಯಂಬುಲೆನ್ಸ್‌ಗಳ ಸೇವೆಯು ಶೀಘ್ರವಾಗಿ ದೊರಕುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.ಸ್ಥಳೀಯ ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸದೆ ಇದ್ದಾಗ ದೂರದ ಸ್ಥಳಗಳಿಂದ ಬೇರೊಂದು ಆ್ಯಂಬುಲೆನ್ಸ್ ಕರೆಸುವುದು ಅನಿವಾರ್ಯವಾಗುತ್ತಿದೆ. ಬೇರೊಂದು ತಾಲೂಕು ಕೇಂದ್ರಗಳ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಬರುವುದು ತಡವಾಗುವ ಕಾರಣಕ್ಕೆ ಆ ವೇಳೆಗಾಗಲೇ ರೋಗಿ ಅಥವಾ ಗಾಯಾಳುವಿನ ಸ್ಥಿತಿ ಗಂಭೀರವಾಗುತ್ತದೆ. ಹಲವು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಬರುವುದು ವಿಳಂಬವಾದರೆ ರೋಗಿಗಳು, ಗಾಯಾಳುಗಳಿಗೆ ಮಾರ್ಗಮಧ್ಯೆಯೇ ಮತ್ತಷ್ಟು ಆರೋಗ್ಯ ಕ್ಷೀಣಿಸುವ ಸಂದರ್ಭವನ್ನು ಅಲ್ಲಗಳೆಯುವಂತಿಲ್ಲ.
ಗ್ರಾಮೀಣ ಭಾಗದಲ್ಲಿ ಆ್ಯಂಬುಲೆನ್ಸ್ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಮಳೆಗಾಲದಲ್ಲಿ ವಿದ್ಯುತ್ ಸ್ಪರ್ಶ, ವಿಷಜಂತುಗಳ ಕಡಿತ, ಸಿಡಿಲು ಬಡಿಯುವುದು ಸೇರಿದಂತೆ ಇನ್ನಿತರೆ ದುರ್ಘಟನೆಗಳು ಸಂಭವಿಸುವ ಪ್ರಮಾಣವು ಹೆಚ್ಚಾಗಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳಿಗೆ ಆ್ಯಂಬುಲೆನ್ಸ್ ಸೇವೆ ಅಗತ್ಯವಾಗಿದೆ. ಆ್ಯಂಬುಲೆನ್ಸ್ ತ್ವರಿತವಾಗಿ ತಲುಪಿದಷ್ಟು ರೋಗಿ ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಆ್ಯಂಬುಲೆನ್ಸ್‌ಗಳು ಸದ್ಯ ಕಾರ್ಯನಿರ್ವಹಿಸದೇ ಹಾಗೆ ಕೆಟ್ಟು ನಿಂತಿವೆ. ತುರ್ತು ಕರೆ ಬಂದರೆ ಮುಧೋಳ, ಕಲಾದಗಿ, ಬಟಕುರ್ಕಿ, ಸಾಲಹಳ್ಳಿ ಪಿಎಚ್‌ಸಿಯಲ್ಲಿನ ಆ್ಯಂಬುಲೆನ್ಸ್‌ಗಳನ್ನು ಕರೆಸಲಾಗುತ್ತಿದೆ ಎಂದೇ ವೈದ್ಯರೊಬ್ಬರು ತಿಳಿಸಿದ್ದಾರೆ. ಪರ್ಯಾಯ ವಾಹನಗಳ ಮೂಲಕ ಸೇವೆ ನೀಡಬೇಕಿದ್ದ ಆರೋಗ್ಯ ಇಲಾಖೆ ರೋಗಿಗಳ ವಿಚಾರದಲ್ಲಿ ಬೇಜವಾಬ್ದಾರಿ ತೋರಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
೧೦೮ ಆ್ಯಂಬುಲೆನ್ಸ್ ಸೇವೆಗೆ ಒಂದೆರಡು ದಿನದಲ್ಲಿ ಪುನಃ ಪ್ರಾರಂಭಿಸಲು ಪ್ರಯತ್ನ ಮಾಡುತ್ತೇನೆ. ಸ್ಥಳೀಯ ವೈದ್ಯಾಧಿಕಾರಿಗೆ ಮಾಹಿತಿ ನೀಡಿ ಗ್ರಾಮೀಣ ಭಾಗಕ್ಕೆ ಹಾಗೂ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ತೊಂದರೆ ಆಗದೆ ನೋಡಿಕೊಳ್ಳುತ್ತೇವೆ.ಡಾ.ಮಂಜುನಾಥ, ಜಿಲ್ಲಾ ವೈದ್ಯಾಧಿಕಾರಿ, ಬಾಗಲಕೋಟೆ
ಗ್ರಾಮೀಣ ಭಾಗದಲ್ಲಿ ಆ್ಯಂಬುಲೆನ್ಸ್ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಮಳೆಗಾಲದಲ್ಲಿ ವಿದ್ಯುತ್ ಸ್ಪರ್ಶ, ವಿಷಜಂತುಗಳ ಕಡಿತ, ಸಿಡಿಲು ಬಡಿಯುವುದು ಸೇರಿದಂತೆ ಇನ್ನಿತರ ದುರ್ಘಟನೆಗಳು ಸಂಭವಿಸುವ ಪ್ರಮಾಣವು ಹೆಚ್ಚಾಗಿದೆ. ಆದಷ್ಟು ಬೇಗನೆ ೧೦೮ ಆ್ಯಂಬುಲೆನ್ಸ್ ಸೇವೆ ಪ್ರಾರಂಭಿಸಬೇಕು.ಗಡ್ಡೆಪ್ಪ ಬಾರಕೇರ, ಹೆಬ್ಬಾಳ ಗ್ರಾಮಸ್ಥರು