ಕಾರಿನಲ್ಲಿ ಸಂಚರಿಸುತ್ತಿದ್ದ ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಯ ಮಕ್ಕಳ ತಜ್ಞರಾದ ದಿನೇಶ್ ಹೆಗಡೆ ಅವರು ವಾಹನವನ್ನು ನಿಲ್ಲಿಸಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಾರುತಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಮಾನವೀಯತೆ ಮೆರೆದರು.

ಯಲ್ಲಾಪುರ: ಅಪಘಾತದಿಂದ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಸಕಾಲಕ್ಕೆ ಆ್ಯಂಬುಲೆನ್ಸ್‌ ಬಾರದೇ ವಿಳಂಬವಾಗಿದ್ದರಿಂದ ರಸ್ತೆಯಲ್ಲೇ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆ ನೀಡಿದ ಘಟನೆ ಮಂಚಿಕೇರಿಯ ತೂಕದಬೈಲ್‌ನಲ್ಲಿ ಮಂಗಳವಾರ ನಡೆದಿದೆ.

ಮಂಚಿಕೇರಿಯ ತೂಕದಬೈಲ್ ಬಳಿ ಕಲಘಟಗಿಯ ಮಾರುತಿ ಎಂಬವರು ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕ ಬಿದ್ದು ಒದ್ದಾಡುತ್ತಿದ್ದರು. ಆಗ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ೧೦೮ಕ್ಕೆ ಕರೆ ಮಾಡಿದ್ದಾರೆ. ಆಗ ಡೈವರ್ ಇಲ್ಲ ಎಂದಿದ್ದಾರೆ. ಮಂಚಿಕೇರಿ ಆಸ್ಪತ್ರೆಯ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ವಾಹನ ಸರ್ವಿಸ್‌ಗೆ ಹೋಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ಮಾರ್ಗವಾಗಿ ಕಾರಿನಲ್ಲಿ ಸಂಚರಿಸುತ್ತಿದ್ದ ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಯ ಮಕ್ಕಳ ತಜ್ಞರಾದ ದಿನೇಶ್ ಹೆಗಡೆ ಅವರು ವಾಹನವನ್ನು ನಿಲ್ಲಿಸಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಾರುತಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿ ಮಾನವೀಯತೆ ಮೆರೆದರು. ನಂತರ ಯಲ್ಲಾಪುರ ತಾಲೂಕು ಆಸ್ಪತ್ರೆಯಿಂದ ಬಂದ ಆ್ಯಂಬುಲೆನ್ಸನಲ್ಲಿ ಮಾರುತಿಯನ್ನು ಹೆಚ್ವಿನ ಚಿಕಿತ್ಸೆಗಾಗಿ ಕಳುಹಿಸಲಾಯಿತು.

೧೦೮ ಸಂಸ್ಥೆಯವರು ತಕ್ಷಣ ಅಗತ್ಯ ಚಾಲಕರನ್ನು ನೇಮಿಸಿ, ಸಮರ್ಪಕ ಸೇವೆ ನೀಡಬೇಕು ಎಂದು ಸ್ಥಳೀಯರಾದ ನವೀನ ಸಾಗರ ಹಾಗೂ ಪಪಂ ಮಾಜಿ ಸದಸ್ಯ ಸತೀಶ ನಾಯ್ಕ ಆಗ್ರಹಿಸಿದ್ದಾರೆ.ಇಂದು ನಾಟಕ ಪ್ರದರ್ಶನ

ಸಿದ್ದಾಪುರ: ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ಪ್ರಯುಕ್ತ ಅ. 14ರ ಸಂಜೆ 6.30ಕ್ಕೆ ರಂಗಸೌಗಂಧ ತಂಡದವರಿಂದ ಗಂಗಾಧರ ಕೊಳಗಿ ಅವರ ಕಾದಂಬರಿ ಆಧರಿತ ನಾಟಕ ಗಾಂಜಾ ಗ್ಯಾಂಗ್ ಪ್ರದರ್ಶನಗೊಳ್ಳಲಿದೆ.ಸುಬ್ರಾಯ ಮತ್ತಿಹಳ್ಳಿ ರಂಗರೂಪ ನೀಡಿ, ಗಣಪತಿ ಹೆಗಡೆ ಹುಲಿಮನೆ ನಿರ್ದೇಶಿಸಿದ ಈ ನಾಟಕಕ್ಕೆ ರಾಜೇಂದ್ರ ಹೆಗಡೆ ಕೊಳಗಿ ಸಂಗೀತ ನಿರ್ದೇಶನ ನೀಡಿದ್ದು, ಸಂಜಯ ಭಟ್ಟ ಬಿಳಗಿ ತಬಲಾ ಸಹಕಾರ ನೀಡಿದ್ದಾರೆ. ಶ್ರೀಪಾದ ಹೆಗಡೆ ವಿನ್ಯಾಸ ಒದಗಿಸಿದ್ದಾರೆ. ಗಣಪತಿ ಹೆಗಡೆ ಗುಂಜಗೋಡ, ನಾಗಪತಿ ಭಟ್ಟ ವಡ್ಡಿನಗದ್ದೆ, ರಾಮ ಅಂಕೋಲೇಕರ, ರಮೇಶ ಭಟ್ಟ ಲಕ್ಕಿಜಡ್ಡಿ, ಐ.ಕೆ. ನಾಯ್ಕ ಸುಂಗೊಳ್ಳಿಮನೆ, ಪ್ರವೀಣಾ ಹೆಗಡೆ, ಶುಭಾ ರಮೇಶ, ಅಜಿತ ಭಟ್ಟ ಹೆಗ್ಗಾರಳ್ಳಿ, ಪೂರ್ಣಚಂದ್ರ ಹೆಗಡೆ ಹುಲಿಮನೆ, ಶಮಂತ ಹೆಗಡೆ ಅಭಿನಯಿಸಲಿದ್ದಾರೆ.