ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುತಮ್ಮ ಜೀವದ ಹಂಗು ತೊರೆದು ಇನ್ನೊಬ್ಬರ ಜೀವ ಉಳಿಸಲು ಕೆಲಸ ಮಾಡುವ ಅಂಬ್ಯುಲೆನ್ಸ್ ಡ್ರೈವರ್‌ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಅಖಿಲ ಕರ್ನಾಟಕ ಆ್ಯಂಬುಲೆನ್ಸ್ ರೋಡ್ ಸೇಪ್ಟಿ ತುಮಕೂರು ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಇದು ಜೀವ ಕಳೆಯುವವರೇ ಹೆಚ್ಚಿರುವ ಸಂದರ್ಭದಲ್ಲಿ, ಜೀವ ಉಳಿಸುವ ಕೆಲಸ ಮಾಡುವ ಮೂಲಕ ಸಮಾಜವನ್ನು ಬೆಸೆಯುವ ಮಾನವೀಯ, ಪುಣ್ಯದ ಕೆಲಸ ಎಂದರು.ಸಾರಿಗೆ ಇಲಾಖೆಯ ಇನ್ಸಪೆಕ್ಟರ್ ಮಧುಸೂಧನ್ ಮಾತನಾಡಿ, ಒಂದು ವೃತ್ತಿಯಲ್ಲಿ ತೊಡಗಿರುವವರು ಸಂಘಟಿತರಾಗುವುದು ಒಳ್ಳೆಯ ಕೆಲಸ. ಇದರಿಂದ ನಿಮಗಿಂತ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.ಚಾಲಕ ವೃತ್ತಿ ಎಂಬುದು ಕೀಳಲ್ಲ. ರೋಗಿಗೆ ಆ್ಯಂಬುಲೆನ್ಸ್ ಡ್ರೈವರ್ ದೇವರ ಪ್ರತಿನಿಧಿ ಇದ್ದಂತೆ. ನಿಮ್ಮ ಜೀವದ ಹಂಗು ತೊರೆದು ಕೆಲಸ ಮಾಡುವ ಡ್ರೈವರ್ ಗಳು ತಮ್ಮ ಜೀವನದ ಬಗ್ಗೆ ಕಾಳಜಿ ಹೊಂದಿರಬೇಕು. ಮುಜಾಗ್ರತಾ ಕ್ರಮಗಳನ್ನು ಕೈಗೊಳ್ಳವಲ್ಲಿ ನಿರ್ಲಕ್ಷ ವಹಿಸಬಾರದು ಎಂದು ಕಿವಿ ಮಾತು ಹೇಳಿದರು.ಸಮಾಜ ಸೇವಕ ವಿನಯಕುಮಾರ್ ಮಾತನಾಡಿ, ಆ್ಯಂಬುಲೆನ್ಸ್ ಡ್ರೈವರ್ ಕೆಲಸ ಸುಲಭದ ವೃತ್ತಿಯಲ್ಲ. ಹಗಲು, ರಾತ್ರಿ ಎನ್ನದೆ ಸೇವೆಗೆ ಸಿದ್ದರಿರಬೇಕು. ಹಾಗಾಗಿ ನಿಮ್ಮ ಕುಟುಂಬದ ಬಗ್ಗೆಯೂ ಕಾಳಜಿ ಹೊಂದಿರಬೇಕು. ಆರೋಗ್ಯದ ಕಡೆಗೂ ಗಮನಹರಿಸಬೇಕೆಂದು ಸಲಹೆ ನೀಡಿದರು.ಅಖಿಲ ಕರ್ನಾಟಕ ಆ್ಯಂಬುಲೆನ್ಸ್ ರೋಡ್ ಸೇಪ್ಟಿನ ರಾಜ್ಯ ಸಂಚಾಲಕ ಜೀಶಾನ್ ಅಸದ್ ಮಾತನಾಡಿ, ನಮ್ಮ ಸಂಘ ಹಲವು ವರ್ಷಗಳಿಂದ ಆ್ಯಂಬುಲೆನ್ಸ್ ಸಂಚಾರಕ್ಕೆ ಜೀರೋ ಟ್ರಾಫಿಕ್ ವ್ಯವಸ್ಥೆ, ಸೂಕ್ತ ತಿಳುವಳಿಕೆ ಮೂಲಕ ನಿಗದಿ ಗುರಿ ತಲುಪಲು ಚಾಲಕರಿಗೆ ಅಡೆತಡೆಯಿಲ್ಲದಂತೆ ನೋಡಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಹಾಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ನಾಲ್ಕು ಗಂಟೆಗಳಲ್ಲಿ ಜೀವಂತ ಹೃದಯ,ತುರ್ತು ಚಿಕಿತ್ಸೆ ಅಗತ್ಯವಿರುವ ಚಿಕ್ಕಮಕ್ಕಳನ್ನು ಸಾಗಿಸಲು ಸಾಧ್ಯವಾಗಿದೆ. ತುಮಕೂರು ಜಿಲ್ಲಾ ಶಾಖೆ ಆರಂಭವಾಗಿರುವುದು ನಮಗೆ ಮತ್ತಷ್ಟು ಬಲ ತುಂಬಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ನೆಲಮಂಗಲ ಜನಸ್ನೇಹಿ ನಿರಾಶ್ರಿತರ ಕೇಂದ್ರದ ಮುಖ್ಯಸ್ಥ ಜನಸ್ನೇಹಿ ಯೋಗೀಶ್ ಮಾತನಾಡಿ, ನಾನು ವೃತ್ತಿಯಲ್ಲಿ ಟ್ರಾಕ್ಟರ್ ಡ್ರೈವರ್ , ೭ನೇ ತರಗತಿವರೆಗೆ ಓದಿದ ನನಗೆ ಇಂದು 160ನಿರ್ಗತಿಕರ ಯೋಗಕ್ಷೇಮ ನೋಡಿಕೊಳ್ಳಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಕನ್ನಡದ ಜನರ ಉದಾರತೆಯೇ ಕಾರಣ ಎಂದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಎಕೆಎಆರ್‌ಎಸ್‌ನ ತುಮಕೂರು ಜಿಲ್ಲಾ ಮಾಧ್ಯಮ ವಿಭಾಗದ ಮುಖ್ಯಸ್ಥ ಸೈಯದ್ ಷಹನವಾಜ್ , ತುಮಕೂರು ಜಿಲ್ಲೆಯಲ್ಲಿ ಅಂದಾಜು 250-300 ಆ್ಯಂಬುಲೆನ್ಸ್ ಳಿವೆ. ಮಹಾನಗರಗಳ ದೊಡ್ಡ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸುವ ವೇಳೆ ಆಗತ್ಯವಿರುವ ಝಿರೋ ಟ್ರಾಫಿಕ್ ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಅಲ್ಲದೆ ಡ್ರೈವರ್ ಗಳ ಕಷ್ಟ, ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡಲಾಗುತ್ತಿದೆ ಎಂದರು.ಇದೇ ವೇಳೆ ಸ್ಮಶಾನ ಕಾಯುವ ಯಶೋಧಮ್ಮ, ವಿದ್ಯುತ್ ಚಿತಾಗಾರದ ರಾಮು ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಅಖಿಲ ಕರ್ನಾಟಕ ಆ್ಯಂಬುಲೆನ್ಸ್ ರೋಡ್ ಸೇಪ್ಟಿ ರಾಜ್ಯಾಧ್ಯಕ್ಷ ಸಹೀದ್ ಅಹಮದ್, ಸುಹೇಬ್‌ಪಾಷ, ದರ್ಶನ್.ವಿ.ಪಿ, ದಿನೇಶ್ ಟ.ಆರ್, ಜೀಶಾನ್ ಅಸದ್, ತುಮಕೂರು ಜಿಲ್ಲಾಧ್ಯಕ್ಷ ಇನ್ಯಾಂಟ್ ಸಂದೀಪ್, ಕಿರಣ್,ಕೆ.ಎಂ, ಸೈಯದ್ ಷಹನವಾಜ್(ಶಾನು), ಮಹಮದ್ ಸೂಫಿಯಾನ್, ಮಧುಸೂಧನ್, ಪೃಥ್ವಿ ಮಂಜುನಾಥ್, ಸೈಯದ್ ಇರ್ಫಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.