ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಹಸ್ತಾಂತರ

| Published : Sep 04 2025, 01:01 AM IST

ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ವೆಂಟಿಲೇಟರ್, ಆಕ್ಸಿಜನ್, ಮೆಡಿಕಲ್‌ ಕಿಟ್‌ ಸೇರಿದಂತೆ ಇನ್ನಿತರ ಅತ್ಯಾಧುನಿಕ ಸೌಲಭ್ಯ ಹೊಂದಿದ ₹37 ಲಕ್ಷ ವೆಚ್ಚದ ಆ್ಯಂಬುಲೆನ್ಸ್ ಇದಾಗಿದೆ.

ಶಿರಸಿ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಹಾಗೂ ಕೈಗಾ ಪವರ್ ಗ್ರಿಡ್‌ನಿಂದ ಮಂಜೂರಾದ ಎರಡು ಆ್ಯಂಬುಲೆನ್ಸ್‌ನ್ನು ಶಾಸಕ ಭೀಮಣ್ಣ ನಾಯ್ಕ ಬುಧವಾರ ಆಸ್ಪತ್ರೆಗೆ ಹಸ್ತಾಂತರಿಸಿದರು.

ವೆಂಟಿಲೇಟರ್, ಆಕ್ಸಿಜನ್, ಮೆಡಿಕಲ್‌ ಕಿಟ್‌ ಸೇರಿದಂತೆ ಇನ್ನಿತರ ಅತ್ಯಾಧುನಿಕ ಸೌಲಭ್ಯ ಹೊಂದಿದ ₹37 ಲಕ್ಷ ವೆಚ್ಚದ ಆ್ಯಂಬುಲೆನ್ಸ್ ಇದಾಗಿದೆ. ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ನಿರ್ದೇಶಿತ ಆಸ್ಪತ್ರೆಗೆ ಸಾಗಿಸುವ ರೋಗಿಗಳಿಗೆ ಅನುಕೂಲವಾಗುವ ಆಧುನಿಕ ಸೌಲಭ್ಯ ಹೊಂದಿರುವ ಆ್ಯಂಬುಲೆನ್ಸ್ ಇದಾಗಿದೆ. ಜತೆಗೆ ಕೈಗಾ ಪವರ್ ಗ್ರಿಡ್ ನ ಸಿಎಸ್ಆರ್ ಫಂಡ್‌ನಿಂದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್ ನೀಡಿದ್ದು, ಆಸ್ಪತ್ರೆ ಆಡಳಿತಕ್ಕೆ ಶಾಸಕ ಭೀಮಣ್ಣ ನಾಯ್ಕ ಒಪ್ಪಿಸಿದರು.

ನಂತರ ಮಾತನಾಡಿದ ಶಾಸಕರು, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಕಾಮಗಾರಿಯು ಅತ್ಯಂತ ತ್ವರಿತಗಿಯಲ್ಲಿ ನಡೆಯುತ್ತಿದೆ. ಶಿರಸಿಗೆ ಮಲ್ಟಿಷ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ ಗುಂಡೂರಾವ ಬಳಿ ವಿನಂತಿಸಿದಾಗ ಇದೇ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೇಗೇರಿಸಿ, ಜಿಲ್ಲಾಸ್ಪತ್ರೆಯನ್ನಾಗಿ ಪರಿವರ್ತಿಸಿ, ಎಲ್ಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕೆಲವು ತಿಂಗಳಿನಲ್ಲಿ ಎಲ್ಲ ಸಲಕರಣೆ, ಯಂತ್ರೋಪಕರಣಗಳನ್ನು ಅಳವಡಿಸಿ, ಇಲ್ಲಿನ ಜನರಿಗೆ ಆಸ್ಪತ್ರೆಯ ಸೇವೆ ದೊರಕಿಸಲಾಗುತ್ತದೆ ಎಂದರು.

ಪಂಡಿತ ಸಾರ್ವಜನಿಕ ಆಸ್ಪತ್ರೆಯು 250 ಹಾಸಿಗೆಯಾಗಿ ಮೇಲ್ದರ್ಜೇಗೇರಿಸಿ ಬೃಹತ್‌ ಕಟ್ಟಡ ನಿರ್ಮಾಣವಾಗಲು ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರಣ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಉಳಿದ ಹಣ ಬಿಡುಗಡೆಗೊಳಿಸಲಾಗಿದೆ. ಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕಿಸಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದರು.

50 ವರ್ಷ ಮೇಲ್ಪಟ್ಟವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಸಣ್ಣ ಕಾಯಿಲೆಗಳು ಕಂಡುಬಂದರೂ ನಿರ್ಲಕ್ಷ್ಯ ಮಾಡದೇ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಶಿರಸಿ-ಸಿದ್ದಾಪುರ ತಾಲೂಕು ಆಸ್ಪತ್ರೆಗೆ ಸುಸಜ್ಜಿತ ಆ್ಯಂಬುಲೆನ್ಸ್‌ ನೀಡಬೇಕು ಎಂಬ ನಿಟ್ಟಿನಲ್ಲಿ ಸುಮಾರು ₹37 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಸಲಕರಣೆಗಳುಳ್ಳ ಆ್ಯಂಬುಲೆನ್ಸ್‌ ನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ನೀಡಲಾಗಿದೆ. ಅದರಂತೆ ಕೈಗಾ ಪವರ್‌ ಗ್ರಿಡ್‌ನವರು ಆ್ಯಂಬುಲೆನ್ಸ್‌ ನೀಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವುಳ್ಳವರಿಗೆ ಇನ್ನೊಂದು ಆಸ್ಪತ್ರೆಗೆ ದಾಖಲಿಸಲು ಈ ಆ್ಯಂಬುಲೆನ್ಸ್‌ ಬಳಕೆಯಾಗಲಿದೆ ಎಂದು ಹೇಳಿದರು.

ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ನೀಡಲಾದ ಆ್ಯಂಬುಲೆನ್ಸ್‌ ತುರ್ತು ಸಂದರ್ಭದಲ್ಲಿ ಅಗತ್ಯವಿದ್ದರೆ 9480529936 ಅಥವಾ 08384-229936 ಈ ನಂಬರ್‌ ಸಂಪರ್ಕಿಸಿ ಸೇವೆ ಪಡೆಯಬಹುದಾಗಿದೆ ಎಂದರು.

ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನೇತ್ರಾವತಿ ಸಿರ್ಸಿಕರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಪ್ರಮುಖರಾದ ಗಣೇಶ ದಾವಣಗೆರೆ, ದೀಪಕ ಹೆಗಡೆ ದೊಡ್ಡೂರ, ಶ್ರೀಪಾದ ಹೆಗಡೆ ಕಡವೆ, ಶ್ರೀನಿವಾಸ ನಾಯ್ಕ ಇದ್ದರು.