ಸಾರಾಂಶ
ರಾಮನಗರ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಸಕ್ರಿಯತೆಯಿಂದ ಕಾರ್ಯನಿರ್ವಹಿಸಬೇಕಿದ್ದು, ರಾತ್ರಿಯ ವೇಳೆ ಆ್ಯಂಬುಲೆನ್ಸ್ ಸೇವೆ ಸಮರ್ಪಕವಾಗಿರಬೇಕು. ತಮಿಳುನಾಡಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಗೆ ಸೇವೆ ದೊರಕುತ್ತಿಲ್ಲ ಎಂಬುದು ತಿಳಿದುಬಂದಿದ್ದು, ಅದಕ್ಕಾಗಿ ಸಿಎಸ್‌ಆರ್ ನಿಧಿಯಲ್ಲಿ 4 ಆ್ಯಂಬುಲೆನ್ಸ್ ಗಳನ್ನು ಮೂರು ತಿಂಗಳಿನೊಳಗೆ ಒದಗಿಸಲಾಗುವುದು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಲ್ಕು ಆ್ಯಂಬುಲೆನ್ಸ್ ಗಳನ್ನು ಕೇವಲ ಗಡಿ ಭಾಗದ ಜನರ ಸೇವೆಗೆ ಮೀಸಲಿರಿಸಬೇಕು. ಸಾತನೂರು ಹಾಗೂ ಕನಕಪುರದ ಕೋಳಗೊಂಡನಹಳ್ಳಿಯಲ್ಲಿ ವೈದ್ಯರಿಲ್ಲ ಎಂಬ ದೂರಿದ್ದು, ರಾಮನಗರ ಬಿಟ್ಟು ಕೆಲವೆಡೆ ಸಮಸ್ಯೆಗಳಿವೆ. ಜಿಲ್ಲೆಯ ಗಡಿಗಳಿಂದ ಆ್ಯಂಬುಲೆನ್ಸ್ ಬದಲಾಗುತ್ತಿವೆ. ಹೀಗಾಗಿ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಯಾವುದೇ ಮಿತಿಗಳಿಲ್ಲದೇ ಆ್ಯಂಬುಲೆನ್ಸ್ ಗಳು ಸಂಚರಿಸಬೇಕು ಎಂದು ಸೂಚಿಸಿದರು.ಪೊಲೀಸ್‌ರ ಸಹಕಾರದೊಂದಿಗೆ ವಾಟ್ಸ್ಅಪ್ ಗ್ರೂಪ್ ರಚಿಸಿ, ತುರ್ತು ಸೇವೆಗಳಂತೆ ಆ್ಯಂಬುಲೆನ್ಸ್ ಗಳನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ನರ್ಸಿಂಗ್ ಕಾಲೇಜುಗಳಿಗೂ ಈ ಬಗ್ಗೆ ಮಾಹಿತಿ ನೀಡಬೇಕು. ಈಗ ನೀಡುತ್ತಿರುವ 13 ಸಾವಿರ ರು.ಗಳ ಬದಲಿಗೆ 20 ಸಾವಿರ ರು.ಗಳನ್ನು ನೀಡುವಂತೆ ಕೇಂದ್ರ ಸಚಿವರಿಗೂ ಮನವಿ ಮಾಡಲಾಗಿದೆ ಎಂದರು.
ಹೈ ರಿಸ್ಕ್ ಡೆಲಿವರಿ ಸೇರಿದಂತೆ ರಾತ್ರಿ ಪಾಳಯದಲ್ಲಿ ಜಿಲ್ಲಾ ಆಸ್ಪತ್ರೆಯು ಮತ್ತಷ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸಿದ್ದವಾಗಬೇಕು. ಒಬಿಜಿ, ರೇಡಿಯಾಲಜಿ, ಇತರೆ ಚಟುವಟಿಕೆಗಳಿಗಾಗಿ ಸುತ್ತಮುತ್ತಲಿನ ಮೂರು ಖಾಸಗಿ ಮೆಡಿಕಲ್ ಕಾಲೇಜಿನೊಂದಿಗೆ ಚರ್ಚಿಸಿ ಅವುಗಳ ಸಹಕಾರ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಅವರಿಗೆ ಸಂಸದರು ನಿರ್ದೇಶನ ನೀಡಿದರು.ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಕ್ಷೇತ್ರ ಭೇಟಿ ಕೈಗೊಳ್ಳಬೇಕು, ಆ ಮೂಲಕ ರೈತರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ತಳಮಟ್ಟದಲ್ಲಿಯೇ ತಿಳಿದುಕೊಳ್ಳಬೇಕು ಹಾಗೂ ಆ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಯತ್ನ ಮಾಡಬೇಕು, ಭೂಮಿಯ ಫಲವತ್ತತೆ ಕುಂಠಿತಗೊಳ್ಳುತ್ತಿರುವ ವರದಿ ಬರುತ್ತಿದ್ದು, ಫಲವತ್ತತೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಹವಾಮಾನ ಆಧಾರಿತ ವಿಮಾ ಯೋಜನೆಯಡಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಸಂಸದ ಡಾ. ಮಂಜುನಾಥ್ ಸೂಚಿಸಿದರು.
123 ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ ಒಟ್ಟು 62,743 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಪ್ರದೇಶವಿದೆ, ಇದರಲ್ಲಿ 27,900 ಹೆಕ್ಟರ್.ಲ್ಲಿ ತೆಂಗು ಹಾಗೂ 27,723 ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ವರ್ಷ ಅತ್ಯಂತ ಉಷ್ಣಾಂಶದಿಂದಾಗಿ ಮಾವು ಬೆಳೆ ಸಂಪೂರ್ಣ ಕೈಕೊಟ್ಟಿದೆ. ಜಿಲ್ಲೆಯಿಂದ ಒಟ್ಟು 1.85 ಲಕ್ಷ ಪ್ರಿಮಿಯಂ ಅನ್ನು ಜಿಲ್ಲೆಯಿಂದ ಇರಿಸಲಾಗಿದೆ. ಕಳೆದ ವರ್ಷ ಇದಕ್ಕೆ ಪ್ರತಿಯಾಗಿ 141 ಲಕ್ಷ ಹಣ ವಿಮೆ ಪಾವತಿಯಾಗಿದೆ ಎಂದರು. 21 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಇಲಾಖೆಯಲ್ಲಿ 41 ಸಿಬ್ಬಂದಿಯಷ್ಟೆ ಕೆಲಸ ಮಾಡುತ್ತಿದ್ದು, 123 ಸಿಬ್ಬಂದಿಗಳ ಕೊರತೆ ಇದೆ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಬಸವರಾಜು ವಿವರಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ , ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಉಪಸ್ಥಿತರಿದ್ದರು.ಎಕ್ಸ್ ಪ್ರೆಸ್ ವೇನಲ್ಲಿ ಸ್ಕೈ ವಾಕ್ ನಿರ್ಮಿಸಿ - ಮಂಜುನಾಥ್
ರಾಮನಗರ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಎಂಟ್ರಿ ಪಡೆಯುವ ಕೆಂಗೇರಿಯ ಕದಂಬ ಜಂಕ್ಷನ್ ವಾರಂತ್ಯದಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕು. 6 ಸ್ಕೈ ವಾಕ್ ಗಳ ಕಾಮಗಾರಿ ಆದಷ್ಟು ಶೀಘ್ರದಲ್ಲೇ ಪ್ರಾರಂಭಿಸುವಂತೆ ಸಂಸದ ಮಂಜುನಾಥ್ ತಿಳಿಸಿದರು.ಎಕ್ಸ್ ಪ್ರೆಸ್ ವೇ ಮಾದರಿಯಲ್ಲಿಯೇ ಬೆಂಗಳೂರು-ಚಾಮರಾಜನಗರ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ ಪೊಲೀಸ್ ಇಲಾಖೆ ಗುರುತಿಸಿರುವ ಅಪಘಾತ ವಲಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎಕ್ಸ್ ಪ್ರೆಸ್ ವೇನಲ್ಲಿ ನಿರ್ಮಾಣವಾಗಬೇಕಿರುವ ಸ್ಕೈ ವಾಕ್‌ಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದರು.