ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ತಿದ್ದುಪಡಿ ಅಸಾಧ್ಯ: ಡಾ. ಸಿ. ಬಸವರಾಜು

| Published : May 13 2025, 01:17 AM IST

ಸಾರಾಂಶ

ಸಂವಿಧಾನಕ್ಕೆ ತಿದ್ದುಪಡಿ ತಪ್ಪಲ್ಲ. ಆದರೆ, ಸಮಾಜದ ಹಿತಕ್ಕೆ ಅನುಗುಣವಾಗಿ, ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದ ವಿರುದ್ಧವಾಗಿ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ನಮ್ಮ ಸಂವಿಧಾನ ಇಂದಿಗೂ ಗಟ್ಟಿಯಾಗಿ ಉಳಿದಿದೆ.

ಹುಬ್ಬಳ್ಳಿ: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾವುದೇ ಕಾರಣಕ್ಕೂ ಸಂವಿಧಾನ ತಿರುಚಲು ಮತ್ತು ಬದಲಾಯಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸಿ. ಬಸವರಾಜು ಹೇಳಿದರು.

ಎಬಿವಿಪಿ ಸಂಘಟನೆ ವತಿಯಿಂದ ಇಲ್ಲಿನ ಕೆಎಲ್‌ಇ ಟೆಕ್ ಆಡಿಟೋರಿಯಂನಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಬದಲಾಯಿಸಿದ್ದು ಯಾರು? ಬಲಪಡಿಸಿದ್ದು ಯಾರು? ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನಕ್ಕೆ ತಿದ್ದುಪಡಿ ತಪ್ಪಲ್ಲ. ಆದರೆ, ಸಮಾಜದ ಹಿತಕ್ಕೆ ಅನುಗುಣವಾಗಿ, ಸಂವಿಧಾನದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದ ವಿರುದ್ಧವಾಗಿ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ನಮ್ಮ ಸಂವಿಧಾನ ಇಂದಿಗೂ ಗಟ್ಟಿಯಾಗಿ ಉಳಿದಿದೆ. ಸಂವಿಧಾನ ತಿದ್ದುಪಡಿಯ ವಿಷಯದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಮಧ್ಯೆ ಆಗಾಗ ಸಂಘರ್ಷಗಳು ಏರ್ಪಡುತ್ತಿವೆ ಎಂದು ತಿಳಿಸಿದರು.

ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ದೇಶ ಸ್ವಾತಂತ್ರ್ಯಾ ನಂತರ ಯಾವೊಬ್ಬ ಪ್ರಜೆಗೂ ಅನ್ಯಾಯವಾಗದಂತಹ ಸಂ‍‍ವಿಧಾನ ಕೊಟ್ಟ ಹೆಗ್ಗಳಿಕೆ ಡಾ. ಬಿ.ಆರ್‌. ಅಂಬೇಡ್ಕರ್‌ ಅವರದ್ದು ಎಂದರು.

ಸಂವಿಧಾನ ಸಮರ್ಪಣೆಗೊಂಡ 75 ವರ್ಷಗಳ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ಕುರಿತಂತೆ ಎಲ್ಲೆಡೆ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ಎಬಿವಿಪಿ ಇಂತಹ ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಅವರು ಪುಸ್ತಕ ಪರಿಚಯಿಸಿದರು. ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರವಣ್ ಬಿ. ರಾಜ್, ಎಬಿವಿಪಿ ರಾಜ್ಯಾಧ್ಯಕ್ಷ ಡಾ. ಆನಂದ ಬಿ. ಹೊಸೂರ, ಸಚಿನ ಕುಳಗೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು.