ಆರು ದಶಕಗಳ ಬಳಿಕ ‘ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್’ ವಿಭಜನೆಗೆ ಅಣಿಯಾಗಿರುವ ರಾಜ್ಯ ಸರ್ಕಾರಕ್ಕೆ ಈಗ ತನ್ನ ಉದ್ದೇಶ ಜಾರಿಗೊಳಿಸಲು ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಸ್ಥಿತಿ ಎದುರಾಗಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಆರು ದಶಕಗಳ ಬಳಿಕ ‘ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್’ ವಿಭಜನೆಗೆ ಅಣಿಯಾಗಿರುವ ರಾಜ್ಯ ಸರ್ಕಾರಕ್ಕೆ ಈಗ ತನ್ನ ಉದ್ದೇಶ ಜಾರಿಗೊಳಿಸಲು ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಸ್ಥಿತಿ ಎದುರಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆ-1963 ಪ್ರಕಾರ ಬೆಂಗಳೂರು ಪೊಲೀಸ್ ಕಮೀಷನರೇಟ್ ರಚಿಸಲಾಗಿದ್ದು, ಕಾಯ್ದೆಯಲ್ಲಿ ‘ಮುಖ್ಯ ಆಯುಕ್ತ ಅಥವಾ ಚೀಫ್ ಕಮೀಷನರ್’ ಎಂಬ ಪದ ಉಲ್ಲೇಖವಾಗಿಲ್ಲ. ಹೀಗಾಗಿ ಈಗಿನ ಪ್ರಸ್ತಾಪಿತ ವಿಭಜನೆ ಪ್ರಸ್ತಾವನೆ ಅನುಷ್ಠಾನಕ್ಕೆ ತಾಂತ್ರಿಕ ತೊಡಕು ಎದುರಾಗಿದೆ ಎಂದು ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ.
ಬಿಬಿಎಂಪಿ ವಿಭಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿದ ಮಾದರಿಯಲ್ಲೇ ಪೊಲೀಸ್ ಕಮೀನರೇಟ್ ವಿಭಜನೆಗೆ ಸರ್ಕಾರ ಮುಂದಾಗಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಶರವೇಗದಲ್ಲಿ ಪ್ರಗತಿ ಕಾಣುತ್ತಿದೆ. ರಾಜಧಾನಿಯ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಕಮೀಷನರೇಟ್ ವಿಭಜಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಕಾಯ್ದೆ ಏನು ಹೇಳುತ್ತದೆ:
1963ರಲ್ಲಿ ಪೊಲೀಸ್ ಕಾಯ್ದೆಯಡಿ ಬೆಂಗಳೂರು ಪೊಲೀಸ್ ಕಮೀಷನರೇಟ್ ಘಟಕ ರಚಿಸಿದ ಸರ್ಕಾರ ಕಮೀಷನರ್ ಹುದ್ದೆಗೆ ಡಿಐಜಿ ಮೇಲ್ಮಟ್ಟದ ಐಪಿಎಸ್ ಅಧಿಕಾರಿ ಅರ್ಹರಾಗಲಿದ್ದಾರೆ ಎಂದಿತ್ತು. 1963 ರಿಂದ 1976ರ ವರೆಗೆ ಡಿಐಜಿ ಮಟ್ಟದ ಅಧಿಕಾರಿಗಳು ಆಯುಕ್ತರಾಗಿದ್ದರು. ಆನಂತರ 1976ರಲ್ಲಿ ಆಯುಕ್ತರ ಹುದ್ದೆಯನ್ನು ಐಜಿಪಿ ಪದವಿಗೆ ಮೇಲ್ದರ್ಜೇಗೇರಿಸಿತು. ತರುವಾಯ ಆ ಹುದ್ದೆ ಎಡಿಜಿಪಿಗಳಿಗೆ ಮೀಸಲಾಯಿತು. ಪೊಲೀಸ್ ಕಮೀಷನರೇಟ್ ರಚನೆಯಾದಾಗ 37 ಠಾಣೆಗಳಿದ್ದವು. ಈಗ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ (ಟ್ರಾಫಿಕ್), ಸೈಬರ್, ಮಹಿಳೆ ಹಾಗೂ ಸಿಸಿಬಿ ಸೇರಿದಂತೆ ಒಟ್ಟು 187 ಠಾಣೆಗಳಿವೆ. ಆದರೆ ಕಾಲಕ್ರಮೇಣ ಆಯುಕ್ತ ಹುದ್ದೆಯ ಪದನ್ನೋತ್ತಿ ಹೊಂದಿದೆ ಹೊರತು ಅದರ ಮೂಲ ಸ್ವರೂಪ ಬದಲಾಗಿಲ್ಲ. ಈಗ ಆಯುಕ್ತ ಅಥವಾ ಕಮೀಷನರ್ ಎಂಬುದನ್ನೇ ಬದಲಾಯಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ತಾಂತ್ರಿಕ ತೊಡಕು ಸರ್ಕಾರಕ್ಕೆ ಎದುರಾಗಿದೆ.
ಪರಿಷ್ಕರಣೆ ಹೇಗೆ?
ಪೊಲೀಸ್ ಕಮೀಷನರ್ ವಿಭಜನೆಗೆ ಮುನ್ನ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿ ತಂದು ಮುಖ್ಯ ಆಯುಕ್ತ ಅಥವಾ ಚೀಫ್ ಕಮೀಷನರ್ ಎಂಬ ಪದ ಸೇರ್ಪಡೆಗೊಳಿಸಬೇಕು. ಈ ತಿದ್ದುಪಡಿ ಕಾಯ್ದೆ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯಿಸಿ ವಿಧಾನಸಭೆಯ ಉಭಯ ಸದನಗಳಲ್ಲಿ ಮಂಡನೆಯಾಗಬೇಕು. ಅನುಮೋದನೆ ಬಳಿಕ ಅಧಿಕೃತವಾಗಿ ರಾಜ್ಯ ಪತ್ರ ಹೊರಡಿಸಬೇಕಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿಯಾಗದೇ ಕಮೀಷನರೇಟ್ ವಿಭಜನೆಗೆ ಆದೇಶ ಹೊರಡಿಸಿದರೆ ಕಾನೂನಾತ್ಮಕ ಸಮಸ್ಯೆ ಎದುರಾಗಲಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸರ್ಕಾರದ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ. ಹೀಗಾಗಿ ಕಾಯ್ದೆ ತಿದ್ದುಪಡಿ ತಂದು ವಿಧಾನಸಭೆಯ ಮಂಡನೆ ಮುನ್ನ ಸುಗ್ರೀವಾಜ್ಞೆ ಮೂಲಕ ಜಾರಿಗೂ ಅವಕಾಶವಿದೆ ಎಂದು ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದಂದು ಆದೇಶಕ್ಕೆ ಚಿಂತನೆ
ನ.1ರ ಕನ್ನಡ ರಾಜ್ಯೋತ್ಸವದಂದು ಬೆಂಗಳೂರು ಕಮೀಷನರೇಟ್ ವಿಭಜನೆ ಆದೇಶವನ್ನು ಹೊರಡಿಸಲು ಸರ್ಕಾರದ ಮಟ್ಟದಲ್ಲಿ ತಯಾರಿ ನಡೆದಿದೆ. ಇದಕ್ಕಾಗಿ ಗೃಹ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಐದು ಅಥವಾ ಮೂರು ಕಮೀಷನರೇಟ್?
ಹೊಸದಾಗಿ ಎಷ್ಟು ಕಮೀಷನರೇಟ್ ರಚನೆಯಾಗುತ್ತವೆ ಎಂಬುದು ಖಚಿತವಾಗಿಲ್ಲ. ಮುಖ್ಯಮಂತ್ರಿ ಅವರು ಐದು ಕಮೀಷನರೇಟ್ ಮಾಡಲಾಗುತ್ತದೆ ಎಂದಿದ್ದಾರೆ. ಆದರೆ ಆ ಘೋಷಣೆ ಕಾರ್ಯರೂಪಕ್ಕಿಳಿಯುವ ಬಗ್ಗೆ ಗೊಂದಲಗಳಿವೆ. ಕೆಲವರು ಐದು, ಮತ್ತೆ ಕೆಲವರ ಮೂರು ಹೀಗೆ ಚರ್ಚೆ ನಡೆದಿದೆ. ಆದರೆ ಕಮೀಷನರ್ ಹುದ್ದೆ ಆಕಾಂಕ್ಷಿಗಳು ಮಾತ್ರ ತಮ್ಮ ಗಾಡ್ ಫಾದರ್‌ಗಳ ಮೂಲಕ ಪದವಿಗೇರಲು ಪ್ರಯತ್ನ ಮಾತ್ರ ಭರ್ಜರಿಯಾಗಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
