ಇಸ್ಕೂಲಿಗೆ ಬಂತು ಅಮೆರಿಕದ ಡಾಲರ್

| Published : Sep 05 2024, 12:39 AM IST

ಸಾರಾಂಶ

ಇಸ್ಕೂಲು ಪುಸ್ತಕ ಓದಿದ ಅಮೆರಿಕದಲ್ಲಿ ನೆಲೆಸಿದ ಕನ್ನಡಿಗರು ಬೆಂಗಳೂರಿನ ಸಂಜಯ ಅವರ ಮೂಲಕ ಅಮೆರಿಕದಿಂದ ಡಾಲರ್ಸ್ ಕಳಿಸಿದ್ದಾರೆ.

ಕಾರವಾರ: ಶಿಕ್ಷಕಿ, ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಬರೆದ “ಇಸ್ಕೂಲು” ಪುಸ್ತಕ ಅಣಶಿ ಶಾಲೆಗೆ ಅಮೆರಿಕದಿಂದ ಡಾಲರ್‌ಗಳೂ ಹರಿದು ಬರಲು ಕಾರಣವಾಗಿದೆ. ಅಕ್ಷತಾ ಕೃಷ್ಣಮೂರ್ತಿ ತಾವು ಶಿಕ್ಷಕಿಯಾಗಿರುವ ಜೋಯಿಡಾ ತಾಲೂಕಿನ ಅಣಶಿ ಶಾಲೆಯನ್ನೇ ಮುಂದಿಟ್ಟುಕೊಂಡು ಬರೆದ “ಇಸ್ಕೂಲು” ಪುಸ್ತಕ ಈಗಾಗಲೇ ಬಹಳಷ್ಟು ಓದುಗರನ್ನು ತಲುಪಿದೆ. ಪುಸ್ತಕ ಓದಿದ ಓದುಗರು ಅಣಶಿ ಶಾಲೆಯ ಬಗ್ಗೆ ಆಸಕ್ತಿ ಹೊಂದಿ ಇವರು ಆಯೋಜಿಸುವ ನಾವೀನ್ಯತೆಯ ಚಟುವಟಿಕೆ ಗಮನಿಸುತ್ತಾ ಸದಾ ಪ್ರೋತ್ಸಾಹ ಕೊಡುತ್ತಿದ್ದಾರೆ. ಈ ವರೆಗೆ ಇಸ್ಕೂಲು ಪುಸ್ತಕ ಓದುಗರು ಸುಮಾರು ಮೂರು ಲಕ್ಷ ರು. ಮೌಲ್ಯದ ಸಾಮಗ್ರಿಗಳನ್ನು ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದ್ದಾರೆ. ಪುಸ್ತಕ ಮೂಲಕ ಈ ರೀತಿ ಸರ್ಕಾರಿ ಶಾಲೆ ಅಭಿವೃದ್ಧಿಯತ್ತ ಸಾಗುತ್ತಿದೆ.ಇಸ್ಕೂಲು ಪುಸ್ತಕ ಓದಿದ ಅಮೆರಿಕದಲ್ಲಿ ನೆಲೆಸಿದ ಕನ್ನಡಿಗರು ಬೆಂಗಳೂರಿನ ಸಂಜಯ ಅವರ ಮೂಲಕ ಅಮೆರಿಕದಿಂದ ಡಾಲರ್ಸ್ ಕಳಿಸಿದ್ದಾರೆ. ಹರಟೆ ಕಟ್ಟೆ ಕನ್ನಡಿಗರು ಅಮೆರಿಕದಲ್ಲಿ ಕನ್ನಡ ಬೆಳೆಸಲು ಸಕ್ರಿಯವಾಗಿ ತೊಡಗಿದವರಾಗಿದ್ದಾರೆ. ಜತೆಗೆ ಕನ್ನಡ ಸಾಹಿತ್ಯ ಓದುಗರೂ ಆಗಿದ್ದಾರೆ.ಬೆಂಗಳೂರಿನಲ್ಲಿ ನೆಲೆಸಿದ್ದ ಸಂಜಯ ಅವರು ಅಕ್ಷತಾ ಅವರ ಇಸ್ಕೂಲು ಪುಸ್ತಕ ಓದಿ ಅಣಶಿ ಶಾಲೆಯನ್ನು ಈ ಹಿಂದೆ ಹುಡುಕಿ ಬಂದವರು. ಲೇಖಕಿ ಅಕ್ಷತಾ ಹಾಗೂ ಅಣಶಿ ಶಾಲೆಯ ಚಟುವಟಿಕೆಯನ್ನು ಆಸಕ್ತಿಯಿಂದ ಗಮನಿಸಿದ್ದರು. ಅವರು ತಮ್ಮ ಕಾರ್ಯ ನಿಮಿತ್ತ ಅಮೆರಿಕಕ್ಕೆ ಹೋದಾಗ, ಇಸ್ಕೂಲು ಓದುಗರು ಅವರ ಮೂಲಕ ಅಕ್ಷತಾ ಅವರಿಗೆ ಡಾಲರ್ಸ್ ಕಳಿಸಿದ್ದಾರೆ. ಶಾಲೆಯ ಅಭಿವೃದ್ಧಿಗಾಗಿ ಅದನ್ನು ಅಕ್ಷತಾ ಬಳಸಿಕೊಂಡಿದ್ದಾರೆ.ಮತ್ತಷ್ಟು ಖುಷಿ: ಪುಸ್ತಕದಿಂದ ಶಾಲೆ ಅಭಿವೃದ್ಧಿ ಕಾಣುತ್ತಿರುವುದು ಅತೀವ ಸಂತಸವಾಗಿದೆ. ಅದರಲ್ಲೂ ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ಅಮೆರಿಕದಿಂದ ಡಾಲರ್‌ಗಳು ಬಂದಿರುವುದು ಇನ್ನಷ್ಟು ಖುಷಿಗೆ ಕಾರಣವಾಗಿದೆ ಎಂದು ಶಿಕ್ಷಕಿ, ಲೇಖಕಿ ಅಕ್ಷತಾ ಕೃಷ್ಣಮೂರ್ತಿ ತಿಳಿಸಿದರು.

ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಸಿದ್ದಾಪುರ: ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘವು ಪ್ರತಿವರ್ಷವೂ ನೀಡುವ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿಗೆ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಸೆ. ೫ರಂದು ನಡೆಯುವ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಹೆಗ್ಗರಣಿ ಸ.ಹಿ.ಪ್ರಾ. ಶಾಲೆಯ ಪದೋನ್ನತ ಮುಖ್ಯ ಶಿಕ್ಷಕ ನಾರಾಯಣ ಅಗೇರ, ತ್ಯಾಗಲಿ ಸ.ಹಿ.ಪ್ರಾ. ಶಾಲೆಯ ಪದೋನ್ನತ ಮುಖ್ಯ ಶಿಕ್ಷಕ ವೀರೇಶ ನಾಯ್ಕ, ವಂದಾನೆ ಸ.ಹಿ.ಪ್ರಾ. ಶಾಲೆಯ ಪದೋನ್ನತ ಮುಖ್ಯ ಶಿಕ್ಷಕಿ ಲಕ್ಷ್ಮಿ ನಾಯ್ಕ, ಹೊಸೂರು ಸ.ಹಿ.ಪ್ರಾ. ಶಾಲೆಯ ಸಹಶಿಕ್ಷಕಿ ಸುರೇಖಾ ಹೆಗಡೆ, ಕಾಳೇನಳ್ಳಿ ಸ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ಶ್ರೀಧರ ಎನ್. ಭಟ್ ಹಾಗೂ ಪ್ರಕಾಶ ಆಚಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಸತೀಶ ಹೆಗಡೆ, ಕಾರ್ಯದರ್ಶಿ ಗುರುರಾಜ ನಾಯ್ಕ ತಿಳಿಸಿದ್ದಾರೆ.