ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಭಾರತೀಯರಾದ ನಾವೆಲ್ಲ ಸಮಭಾವ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದು ಅಮೆರಿಕದ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅಸೋಸಿಯೆಟ್ ಎಡಿಟರ್ ಡಾ.ಅಸಂಗ ವಾಂಖೇಡೆ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ಕೋಶದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು. ಡಾ.ಬಿ ಆರ್ ಅಂಬೇಡ್ಕರ್‌ರವರ ಸಮಗ್ರತೆಯ ವಿಚಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಅದರ ಶ್ರೇಯೋಭಿವೃದ್ಧಿ ಹಾಗೂ ಭಾರತೀಯ ದಂಡ ಸಂಹಿತೆ ಮತ್ತು ಸಮಾನತೆಯ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಿದರು. ಹಾಗೂ ಡಾ.ಬಿ ಆರ್ ಅಂಬೇಡ್ಕರ್ ರವರ ಜೀವನದ ಹೋರಾಟದ ಬಗ್ಗೆ ವಿವರಿಸಿದರು.
ಕುಲಪತಿ ಪ್ರೊ.ಬಿ ಕೆ ತುಳಸಿಮಾಲ ಮಾತನಾಡಿ, ಡಾ.ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪ.ಜಾ/ಪ.ಪಂ ನಿಂದ ಇಂತಹ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾರ್ಗದರ್ಶಿ ಲಭಿಸಿದಂತಾಗುತ್ತದೆ. ವಿದೇಶದಲ್ಲಿ ಪ.ಜಾ/ಪ.ಪಂದ ವಿದ್ಯಾರ್ಥಿಗಳಿಗೆ ಲಭಿಸುವ ಪ್ರಾಯೋಜಕತ್ವದ ಕುರಿತು ಮಾಹಿತಿ ಲಭಿಸುತ್ತಿದೆ. ಅಂತಹ ವಿದೇಶಿ ಪ್ರಾಯೋಜಕತ್ವಗಳನ್ನು ವಿದ್ಯಾರ್ಥಿನಿಯರು ಕೂಡಾ ಪಡೆದುಕೊಳ್ಳಬೇಕು ಎಂದರು.ಕುಲಸಚಿವ ಶಂಕರಗೌಡ ಸೋಮನಾಳ, ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ಕೋಶದ ನಿರ್ದೇಶಕಿ ಪ್ರೊ.ಲಕ್ಷ್ಮಿದೇವಿ ವೈ.ಡಾ.ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ ಸಂಜೀವಕುಮಾರ ಗಿರಿ, ವಿವಿಧ ಅಧ್ಯಯನ ವಿಭಾಗಗಳ ಭೋಧಕ, ಬೋಧಕೇತರ ವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಡಾ ಸಂಜೀವಕುಮಾರ ಗಿರಿ ಸ್ವಾಗತಿಸಿದರು, ಜೈವಿಕ ಮಾಹಿತಿ ಅಧ್ಯಯನ ವಿಭಾಗದ ಸಂಯೋಜಕ ಡಾ.ಬಾಬು ಆರ್ ಎಲ್ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ವಿದ್ಯಾಶ್ರೀ ಎನ್ ಸೂರ್ಯವಂಶಿ ಕಾರ್ಯಕ್ರಮ ನಿರೂಪಿಸಿದರು.