ಸಾರಾಂಶ
ರಾಮನಗರ: ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಜಿಲ್ಲಾಧಿಕಾರಿಗಳ ಆವರಣದಲ್ಲಿ ಪ್ರತಿಭಟನೆಗಳಿಗೆ ಹೇರಿರುವ ನಿಷೇಧಾಜ್ಞೆ ಹಿಂಪಡೆಯುವಂತೆ ಆಗ್ರಹಿಸಿ ಜ.6ರಂದು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಕೈ ಬಿಡಲು ರೈತರು ಒಪ್ಪದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ದ ಸಭೆ ವಿಫಲಗೊಂಡಿತು.
ನಗರದ ಪೊಲೀಸ್ ಭವನದ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ , ಉಪವಿಭಾಗಾಧಿಕಾರಿ ಬಿನೋಯ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುರೇಶ್ , ರಾಮಚಂದ್ರ ಪ್ರತಿಭಟನೆ ಹಿಂಪಡೆದು ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಸಭೆ ಸೇರಿ ಚರ್ಚಿಸುವಂತೆ ಮಾಡಿದ ಮನವಿಯನ್ನು ರೈತ ಮುಖಂಡರು ತಿರಸ್ಕರಿಸಿದರು.ರಾಜ್ಯ ರೈತ ಸಂಘದ ವಿಭಾಗೀಯ ಅಧ್ಯಕ್ಷ ಮಲ್ಲಯ್ಯ ಮಾತನಾಡಿ, ಜಿಲ್ಲಾಧಿಕಾರಿಗಳು ಜಿಲ್ಲೆಯ ಮೊದಲ ಕೂಲಿಕಾರರು. ಕಂದಾಯ ಇಲಾಖೆಯು ರೈತರಿಗೆ ಸಂಬಂಧಿಸಿದ್ದಾಗಿದ್ದು ಇಲಾಖೆಯಲ್ಲಿ ಯಾವ ಅರ್ಜಿಗಳೂ ವಿಲೇವಾರಿಯಾಗದೆ ರೈತರು ಹೈರಾಣಾಗಿದ್ದಾರೆ. ಅಧಿಕಾರಿಗಳು ನಾಳೆ ಬಾ ಎಂಬ ಕೂಗು ಮಾರಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಶೋಷಣೆಗಳನ್ನು ಪ್ರಶ್ನಿಸಬಾರದು ಎಂಬುದು ಸರ್ವಾಧಿಕಾರದ ಮನಸ್ಥಿತಿ. ಇಡೀ ಜಿಲ್ಲೆಯ ಕೇಂದ್ರಸ್ಥಾನ ಜಿಲ್ಲಾಧಿಕಾರಿ ಆಡಳಿತ ಸೌಧವಾಗಿದ್ದು ಜಿಲ್ಲೆಯ ಅನ್ಯಾಯಗಳನ್ನು ಇಲ್ಲಿಯೇ ಪ್ರಶ್ನಿಸಿ, ಪ್ರತಿಭಟಿಸಿ, ನ್ಯಾಯ ಪಡೆದುಕೊಳ್ಳಲು ನಮಗೆ ಸಂವಿಧಾನ ಬದ್ದ ಹಕ್ಕಿದೆ. ಅದನ್ನು ನಾವು ಮರುಸ್ಥಾಪಿಸುತ್ತೇವೆ ಎಂದರು.
ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗಿಂತ ಪರಮೋಚ್ಛ ಅಧಿಕಾರ ಹೊಂದಿದವರಂತೆ ವರ್ತಿಸುತ್ತಿದ್ದಾರೆ. ಯಾವ ಜಿಲ್ಲೆಯಲ್ಲು ಇಲ್ಲದ ನಿಷೇಧಾಜ್ಞೆಯನ್ನ ಇಲ್ಲಿ ಹೇರಲು ಕಾರಣವೇನು? ಎಲ್ಲೆಡೆ ಸಂಘಟನೆಗಳ ಹೋರಾಟ ಸಾಮಾನ್ಯ. ಆದರೆ ಜಿಲ್ಲಾಧಿಕಾರಿಗಳು ಇಂತಹ ಹೋರಾಟ ಬೇಡವೆಂದಿದ್ದರೆ ಆಡಳಿತವನ್ನು ಜನರ ಬಾಗಿಲಿಗೆ ಒಯ್ದು ಜನಪರ ಕರ್ತವ್ಯ ನಿರ್ವಹಿಸಿದರೆ ಹೋರಾಟ ನಡೆಸುವುದೇ ಇಲ್ಲ ಎಂದರು.ಜಿಲ್ಲಾಧಿಕಾರಿಗಳು ತಮ್ಮನ್ನು ತಾವು ಮುಕುಟವಿಲ್ಲದ ಸಾಮ್ರಾಟ ಎಂದು ಭಾವಿಸಿದ್ದಾರೆ. ಯಾವ ಹಿಂಸಾಚಾರ, ಕಲ್ಲು ತೂರಾಟ, ಅಹಿತಕರ ಘಟನೆ ನಡೆಯದಿದ್ದರೂ ನಿಷೇಧಾಜ್ಞೆ ಹೇರಿದ್ದಾರೆ. ಪ್ರತಿಭಟನೆಗೆ ಸೂಚಿಸಿದ ಸ್ಥಳದಲ್ಲಿ ಕಾಲೇಜು ಇದ್ದು ಅಲ್ಲಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ನಿಷೇಧಾಜ್ಞೆ ವಾಪಸ್ ತೆಗೆದುಕೊಳ್ಳುವವರೆಗೂ ಹೋರಾಟನಿರತ ಯಾವ ಸಂಘಟನೆಗಳು ಸಹ ಜಿಲ್ಲಾಧಿಕಾರಿಗಳು ಆಯೋಜಿಸುವ ಸಭೆ ಸಮಾರಂಭ, ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸಭೆಯಲ್ಲಿ ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ರೈತ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ನಾಗರಾಜು, ರವಿ, ಕೃಷ್ಣಯ್ಯ, ಗುರುಲಿಂಗ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಹೊಸದುರ್ಗ ಮತ್ತಿತರರು ಭಾಗವಹಿಸಿದ್ದರು.4ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಪೊಲೀಸ್ ಭವನದ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಅಧಿಕಾರಿಗಳು ಹಾಗೂ ರೈತ ಮುಖಂಡರು ಭಾಗವಹಿಸಿರುವುದು.