ನಿಷೇಧಾಜ್ಞೆ ನಡುವೆ ಮುರುಘಾಮಠದಲ್ಲಿ ಶೂನ್ಯ ಪೀಠಾರೋಹಣ

| Published : Oct 26 2023, 01:01 AM IST

ನಿಷೇಧಾಜ್ಞೆ ನಡುವೆ ಮುರುಘಾಮಠದಲ್ಲಿ ಶೂನ್ಯ ಪೀಠಾರೋಹಣ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವರ್ಷ ವಾಗ್ವಾದ ನಡೆದ ಹಿನ್ನೆಲೆ ಸೆಕ್ಷನ್ 144 ಜಾರಿ । ಮುರುಘಾಶ್ರೀ ಜೈಲು ಪಾಲಾದ ಹಿನ್ನೆಲೆ ಪೀಠದಲ್ಲಿ ಶಾಂತವೀರ ಶ್ರೀಗಳ ಪುತ್ಥಳಿ

ಕಳೆದ ವರ್ಷ ವಾಗ್ವಾದ ನಡೆದ ಹಿನ್ನೆಲೆ ಸೆಕ್ಷನ್ 144 ಜಾರಿ । ಮುರುಘಾಶ್ರೀ ಜೈಲು ಪಾಲಾದ ಹಿನ್ನೆಲೆ ಪೀಠದಲ್ಲಿ ಶಾಂತವೀರ ಶ್ರೀಗಳ ಪುತ್ಥಳಿ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶರಣ ಸಂಸ್ಕೃತಿ ಉತ್ಸವದ ಪ್ರಮುಖ ಭಾಗವಾಗಿ ಬಸವಕೇಂದ್ರ ಮುರುಘಾಮಠದಲ್ಲಿ ನಡೆಯುವ ಶೂನ್ಯಪೀಠಾರೋಹಣ ಈ ಬಾರಿ ಬೇರೆಯದೇ ದೃಶ್ಯಗಳ ರವಾನಿಸಿತು. ಪ್ರತಿ ವರ್ಷ ಮುರುಘಾ ಶ್ರೀ ಸಿಂಹಾಸದಲ್ಲಿ ಕುಳಿತು ಜನತೆಗೆ ದರ್ಶನ ನೀಡುತ್ತಿದ್ದರು. ಆದರೆ ಈ ಬಾರಿ ಪೋಕ್ಸೋ ಪ್ರಕರಣದಲ್ಲಿ ಅವರು ಜೈಲು ಪಾಲಾದ ಹಿನ್ನೆಲೆಯಲ್ಲಿ ಶಾಂತವೀರ ಶ್ರೀಗಳ ಕಂಚಿನ ಪುತ್ಥಳಿಯಿರಿಸಿ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು. ಬಂಗಾರದ ಕೀರಿಟ, ಬಂಗಾರದ ಪಾದುಕೆಗಳು ಹಾಗೂ ಕತೃ ಮುರುಘೇಶನಿಗೆ ಬಂಗಾರದ ರುದ್ರಾಕ್ಷಿ ಸರ ಹಾಕುವುದರ ಮೂಲಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಶ್ರೀಮುರುಘಾಮಠದ ಆಡಳಿತಾಧಿಕಾರಿ .ಬಿ.ಎಸ್.ರೇಖಾ, ಉತ್ಸವ ಗೌರವಾಧ್ಯಕ್ಷ ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಕೆಲವೇ ನಿಮಿಷಗಳಲ್ಲಿ ಶೂನ್ಯಪೀಠಾರೋಹಣದ ಕೈಂಕರ್ಯವನ್ನು ಮಾಡಿ ಮುಗಿಸಿದರು. ಶೂನ್ಯಪೀಠದಲ್ಲಿ ಯಾರಾದರೂ ಸ್ವಾಮೀಜಿ ಕುಳಿತುಕೊಂಡರೆ ಅಚಾತುರ್ಯಗಳಾಗಬಹುದೆಂಬ ಗ್ರಹಿಕೆ ಕಾರಣಕ್ಕೋ ಏನೋ ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144ಅಡಿ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು. ನಿಷೇದಾಜ್ಞೆ ನಡುವೆ ಮಠದ ರಾಜಾಂಗಣದಲ್ಲಿ ಶೂನ್ಯ ಪೀಠಾರೋಹಣ ನೆರವೇರಿತು. ಕಳೆದ ವರ್ಷ ಮಾಜಿ ಶಾಸಕ ಹಾಗೂ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್, ಪತ್ನಿ ಸೌಭಾಗ್ಯ ಬಂದಿದ್ದರಿಂದ ಪೊಲೀಸರ ಜೊತೆ ವಾಗ್ವಾದ ನಡೆದಿತ್ತು. ಹಾಗಾಗಿ ಅಗತ್ಯ ಮುಂಜಾಗ್ರತೆ ಹಿನ್ನೆಲೆ ತಹಸೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದರು ಎನ್ನಲಾಗಿದೆ. ಎಸ್‌ಜೆಎಂ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್‍ಕುಮಾರ್, ಶರಣಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್‍, ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳು, ನೌಕರ ವರ್ಗದವರು ಹಾಗೂ ಜನ ಸಮೂಹದ ಜಯ ಘೋಷಣೆಗಳೊಂದಿಗೆ ಶ್ರೀಮಠದಲ್ಲಿ ಶೂನ್ಯ ಪೀಠಾರೋಹಣವನ್ನು ಸಾಕ್ಷೀಕರಿಸಿದರು. ವಿವಿಧ ಕಲಾತಂಡಗಳು ಶ್ರೀಮಠದ ರಾಜಾಂಗಣದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು. ಶ್ರೀಮಠದ ಪ್ರಾಂಗಣದಲ್ಲಿ ಅಲ್ಲಮ ಪ್ರಭುದೇವರ ಮತ್ತು ಧರ್ಮಗುರು ಬಸವಣ್ಣನವರ ಮತ್ತು ಪ್ರಾಚೀನ ಹಸ್ತ ಪ್ರತಿಗಳನ್ನು ಪಲ್ಲಕ್ಕಿಯಲ್ಲಿ ಇಡುವುದರ ಮೂಲಕ ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಹಾಗೂ ಶ್ರೀಮುರುಘಾಮಠದ ಆಡಳಿತಾಧಿಕಾರಿ ಬಿ.ಎಸ್.ರೇಖಾ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಜಾನಪದ ಕಲಾತಂಡಗಳೊಂದಿಗೆ ಶ್ರೀಮಠದ ಆವರಣದಲ್ಲಿ ವಿವಿಧ ಶಾಖಾಮಠಾಧೀಶರು, ಹರಗುರುಚರಮೂರ್ತಿಗಳ ಹಾಗೂ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಠಾಧೀಶರ ಮುನಿಸು: ಶೂನ್ಯ ಪೀಠಾರೋಹಣಕ್ಕೆ ಪ್ರಮುಖ ಮಠಾಧೀಶರ ಹಾಜರಿಗೆ ನಿರ್ಬಂಧ ಹೇರಿದ ಹಿನ್ನೆಲೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ ಸೇರಿದಂತೆ ಇತರೆ ಶ್ರೀಗಳು ತಮ್ಮ ಬಹಿರಂಗ ಮುನಿಸು ತೋರಿದರು. ನಾವೆಲ್ಲ ಮುರುಘಾಮಠ ಪರಂಪರೆ ವೃಕ್ಷದ ನೆರಳಲ್ಲಿ ಬೆಳೆದುಕೊಂಡು ಬಂದಿದ್ದು, ಶೂನ್ಯಪೀಠಾರೋಹಣದಂತಹ ಪ್ರಮಖ ಘಟ್ಟದ ಕಾರ್ಯಕ್ರಮಕ್ಕೆ ತಮ್ಮನ್ಮು ಹೊರಗಿಟ್ಟ ಬಗ್ಗೆ ಎಲ್ಲರಿಗೂ ಬೇಸರವಿತ್ತು. ಹಾಗಾಗಿ ಎಲ್ಲರೂ ಮುರುಘಾಮಠದಿಂದ ನಿರ್ಗಮಿಸಿ ಭೋವಿ ಗುರುಪೀಠದಲ್ಲಿ ಸಭೆ ಮಾಡಿದರು ಎನ್ನಲಾಗಿದೆ. ಉತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಸಿ.ನಾಗರಾಜ್ ಶ್ರೀಗಳ ಸಂಗಡ ಮಾತನಾಡಿ ಸಹಕಾರ ಕೋರಿದರು ಎಂದು ತಿಳಿದು ಬಂದಿದೆ.