ಕನ್ನಡಪ್ರಭ ವಾರ್ತೆ ವಿಧಾನಮಂಡಲ
ಚಾಮರಾಜನಗರದ ಹನೂರು ಅರಣ್ಯದಲ್ಲಿ ನಡೆದಿರುವ ಶೂಟೌಟ್ ಪ್ರಕರಣ ಸೋಮವಾರ ಉಭಯ ಸದನಗಳಲ್ಲಿ ತೀವ್ರ ಗದ್ದಲ ಸೃಷ್ಟಿಸಿದ್ದು, ‘ನ್ಯಾಯಾಂಗ ತನಿಖೆ ನಡೆಸಬೇಕು. ಮೃತರಿಗೆ 1 ಕೋಟಿ ರು. ಪರಿಹಾರ ನೀಡಬೇಕು’ ಎಂದು ಪ್ರತಿಪಕ್ಷಗಳ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು. ಇದರಿಂದ ಉಭಯ ಸದನಗಳಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳ ವಿನಿಮಯ ಆಗಿದ್ದು, ಗದ್ದಲ ಹೆಚ್ಚಾಗಿದ್ದರಿಂದ ಪರಿಷತ್ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಬೇಕಾಯಿತು.ಮೊದಲಿಗೆ ವಿಧಾನಸಭೆಯಲ್ಲಿ ‘ಅರಣ್ಯ ಸಿಬ್ಬಂದಿ ಎನ್‌ಕೌಂಟರ್‌ನಿಂದ ಮೃತರಾದ ಮೂವರಿಗೂ ಅಪರಾಧದ ಹಿನ್ನೆಲೆ ಇಲ್ಲ. ಜತೆಗೆ ಹತ್ತಿರದಿಂದ ಗುಂಡು ಹಾರಿಸಿದ್ದು, ಇದು ಎನ್‌ಕೌಂಟರ್ ಸರ್ಕಾರದ ಸಿಬ್ಬಂದಿಯ ವ್ಯವಸ್ಥಿತ ಪಿತೂರಿ’ ಪ್ರತಿಪಕ್ಷಗಳ ಸದಸ್ಯರು ಆರೋಪಿಸಿದರು.
ಈ ವೇಳೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ‘ಕಾಡೊಳಗೆ ಅಕ್ರಮವಾಗಿ ಪ್ರವೇಶಿಸಿ ಅರಣ್ಯ ಪ್ರಾಣಿಗಳ ಬೇಟೆಯಾಡಿದ್ದಾರೆ. ಕಾಡಂಚಿನಿಂದ 5-8 ಕಿ.ಮೀ. ಒಳಗೆ ಬೇಟೆಗೆ ಹೋಗಿದ್ದವರು ಗುಂಡು ಹಾರಿಸಿದಾಗ ಸ್ವಯಂ ರಕ್ಷಣೆಗೆ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.ಅಲ್ಲದೆ ಮೃತರ ಬಳಿ ಮಾಂಸ, ಬಂದೂಕು, ಆಯುಧಗಳು ದೊರೆತಿವೆ. ಮ್ಯಾಜಿಸ್ಟ್ರೇಟ್ ತನಿಖೆ ವರದಿ 2 ದಿನದಲ್ಲಿ ಸದನದಲ್ಲಿ ಮಂಡಿಸುತ್ತೇನೆ. ವರದಿ ಬಗ್ಗೆ ಸಮಾಧಾನ ಇಲ್ಲದಿದ್ದರೆ ಸಿಎಂ ಜತೆ ಚರ್ಚಿಸಿ ನ್ಯಾಯಾಂಗ ತನಿಖೆಗೆ ವಹಿಸುತ್ತೇವೆ. ತನಿಖೆಯಲ್ಲಿ ಮೃತರು ಅಮಾಯಕರು ಅಂತ ಸಾಬೀತಾದರೆ ಪರಿಹಾರದ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಭರವಸೆ ನೀಡಿದರು.
ಪರಿಷತ್ತಲ್ಲಿ ಪಟ್ಟುಬಿಡದ ಪ್ರತಿಪಕ್ಷ:
ಆದರೆ, ಪರಿಷತ್‌ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರ ಉತ್ತರದ ಬಳಿಕವೂ ಪ್ರತಿಪಕ್ಷ ಸದಸ್ಯರು ಗದ್ದಲ ಸೃಷ್ಟಿಸಿದರು. ನ್ಯಾಯಾಂಗ ತನಿಖೆಗೆ ವಹಿಸಬೇಕು, ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಆಗಬೇಕೆಂದು ಒತ್ತಾಯಿಸಿದರು. ಈ ವೇಳೆ ಸಭಾಪತಿ ಸಲೀಂ ಅಹಮದ್, ಸಂಧಾನಕ್ಕಾಗಿ ಕಲಾಪ ಮುಂದೂಡಿದರು. ಸಂಧಾನ ಸಭೆ ಬಳಿಕ ಸೇರಿದ ಕಲಾಪದಲ್ಲೂ ಗದ್ದಲ ಮುಂದುವರೆಯಿತು. ಹೀಗಾಗಿ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಬೇಕಾಯಿತು.
ಉಭಯ ಸದನಗಳಲ್ಲಿ ಆರೋಪ-ಪ್ರತ್ಯಾರೋಪ:ಸೋಮವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಹನೂರು ಶೂಟೌಟ್ ಚರ್ಚೆಗೆ ಅವಕಾಶ ಕೋರಿದರು. ಸಭಾಧ್ಯಕ್ಷ ಜಿ.ಎಸ್.ಪಾಟೀಲ್, ಪ್ರಶ್ನೋತ್ತರ ಬಳಿಕ ಅಂದರೂ ಒಪ್ಪದ ಬಿಜೆಪಿ ಸದಸ್ಯರು, ಸರ್ಕಾರವೇ ಸ್ವಯಂ ಪ್ರೇರಿತವಾಗಿ ಸದನದಲ್ಲಿ ಹೇಳಿಕೆ ಕೊಡುತ್ತದೆಂದು ಭಾವಿಸಿದ್ದೆವು. ಆದರೆ ಸರ್ಕಾರ ಏನೂ ನಡೆದಿಲ್ಲ ಎಂಬಂತೆ ಕುಳಿತಿದೆ. ಹೀಗಾಗಿ ಚರ್ಚೆಗೆ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು.
ಅಶೋಕ್ ಮಾತನಾಡಿ, ‘ಮೂವರು ಅಮಾಯಕರನ್ನು ಗುಂಡಿಕ್ಕಿ ಕೊಂದಿದ್ದಾರೆ. ಸ್ಥಳ ಮಹಜರಿಗೆ ಅವಕಾಶವಿಲ್ಲದಂತೆ ಮೃತದೇಹಗಳನ್ನು ಮೈಸೂರಿಗೆ ಸ್ಥಳಾಂತರಿಸಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ, ಇದು ಕೊಲೆಗಡುಕ ಸರ್ಕಾರ, ಎನ್‌ಕೌಂಟರ್ ಸರ್ಕಾರ. ಕರ್ನಾಟಕದಲ್ಲಿ ತಮಿಳರಿಗೆ ರಕ್ಷಣೆಯಿಲ್ಲ ಎಂದು ತಮಿಳುನಾಡು ಸಿಎಂ ಅವರೇ ಹೇಳಿದ್ದಾರೆ. ಸರ್ಕಾರಕ್ಕೆ ಕಣ್ಣಿಲ್ಲವೇ’ ಎಂದು ಪ್ರಶ್ನಿಸಿದರು.ಮೇಲ್ಮನೆಯಲ್ಲೂ ಗದ್ದಲ, ಕಲಾಪ ಬಲಿ:ಮೇಲ್ಮನೆಯಲ್ಲೂ ಹನೂರು ಶೂಟೌಟ್ ಬಗ್ಗೆ ಗದ್ದಲ ನಡೆಯಿತು. ಸರ್ಕಾರದ ವಿವರಣೆಗೆ ತೀವ್ರ ಆಕ್ಷೇಪ, ಅಪಸ್ವರ, ಅನುಮಾನಗಳನ್ನು ವ್ಯಕ್ತಪಡಿಸಿದ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸದಸ್ಯರು ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಂಗ ತನಿಖೆಗೆ ವಹಿಸಬೇಕು, ಮೃತರ ಕುಟುಂಬಗಳಿಗೆ ತಲಾ 1 ಕೋಟಿ ರು. ಪರಿಹಾರ, ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿದರು. ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ, ಪ್ರತಿಪಕ್ಷದವರ ಅಭಿಪ್ರಾಯವನ್ನು ಸಿಎಂ ಒಪ್ಪಿದರೆ ಮುಂದಿನ ಕ್ರಮ ಎಂದರು.
ಬಿಜೆಪಿಯ ಪಿ.ಎಚ್.ಪೂಜಾರ್, ಕೇಶವಪ್ರಸಾದ್, ಮಹಿಮಾದಾಸ್, ನವೀನ್, ಸಿ.ಟಿ.ರವಿ, ರವಿಕುಮಾರ್, ಜೆಡಿಎಸ್‌ನ ಭೋಜೇಗೌಡ ಮತ್ತಿತರ ಸದಸ್ಯರು ಸರ್ಕಾರವನ್ನು ಟೀಕಿಸಿದರು.