ಮಹಿಳಾದಿನಾಚರಣೆ ಮಧ್ಯೆಯೇ ಮಹಿಳೆ ಅತಂತ್ರ

| Published : Mar 09 2025, 01:48 AM IST

ಸಾರಾಂಶ

ಪಾವಗಡ ತಾಲೂಕು ಪಳವಳ್ಳಿ ಗ್ರಾಪಂ ವ್ಯಾಪ್ತಿಯ ವೀರಮ್ಮನಹಳ್ಳಿ ಗ್ರಾಮದ ವಾಸಿ ಎಸ್‌.ಸುನಿತಮ್ಮ ತಮ್ಮ ಮಕ್ಕಳ ಜತೆ ಅನಾಥ ಹೆಣ್ಣುಮಗಳು ಅತಂತ್ರ ಸ್ಥಿತಿಯ ಮನೆಯಲ್ಲಿ ವಾಸವಾಗಿದ್ದು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೂಡಲೇ ಸರ್ಕಾರ ನೆರವಿಗೆ ಬರುವ ಮೂಲಕ ವಾಸಿಸಲು ಮನೆ ಹಾಗೂ ಪಡಿತರ ಚೀಟಿ ಹಾಗೂ ಇತರೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಪಾವಗಡದ ಪೂಜಾರಪ್ಪ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ನಾಗೇಂದ್ರ ಜೆ.

ಕನ್ನಡಪ್ರಭ ವಾರ್ತೆ ಪಾವಗಡ

ಪಾವಗಡ ತಾಲೂಕು ಪಳವಳ್ಳಿ ಗ್ರಾಪಂ ವ್ಯಾಪ್ತಿಯ ವೀರಮ್ಮನಹಳ್ಳಿ ಗ್ರಾಮದ ವಾಸಿ ಎಸ್‌.ಸುನಿತಮ್ಮ ತಮ್ಮ ಮಕ್ಕಳ ಜತೆ ಅನಾಥ ಹೆಣ್ಣುಮಗಳು ಅತಂತ್ರ ಸ್ಥಿತಿಯ ಮನೆಯಲ್ಲಿ ವಾಸವಾಗಿದ್ದು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೂಡಲೇ ಸರ್ಕಾರ ನೆರವಿಗೆ ಬರುವ ಮೂಲಕ ವಾಸಿಸಲು ಮನೆ ಹಾಗೂ ಪಡಿತರ ಚೀಟಿ ಹಾಗೂ ಇತರೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಪಾವಗಡದ ಪೂಜಾರಪ್ಪ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಸುನಿತಮ್ಮ ಪತಿ ಸಿದ್ದರಾಜ್‌ ಕಳೆದ ಮೂರು ವರ್ಷದ ಹಿಂದೆ ಸಾವನ್ನಪ್ಪಿದ್ದು ಮೂರು ಹೆಣ್ಣು ಹಾಗೂ ಒಂದು ಗಂಡುಮಗುವನ್ನು ಸಾಕುವ ಹೊಣೆ ಪತ್ನಿ ಎಸ್‌.ಸುನಿತಾಮ್ಮನ ಹೆಗಲಿಗೆ ಬಿದ್ದಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಶಾಲೆಗೆ ಸೇರಿಸಿದ್ದು ಕೂಲಿಯಿಂದ ಆಕೆ ಜೀವನ ಸಾಗಿಸುತ್ತಿದ್ದಾರೆ. ಹಳೇ ಕಾಲದ ಅತಂತ್ರ ಸ್ಥಿತಿಯ ಮನೆಯಲ್ಲಿ ಮಕ್ಕಳ ಜತೆ ವಾಸವಾಗಿದ್ದು ಅನೇಕ ಬಾರಿ ಮನವಿ ಮಾಡಿದ್ದರೂ ಇದುವರೆವಿಗೂ ಗ್ರಾಪಂನಿಂದ ಮನೆ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಅನ್ನ ಭಾಗ್ಯ ಯೋಜನೆ ಪಡಿತರ ಪದಾರ್ಥ ಪಡೆಯಲು ಹಲವು ಬಾರಿ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರೂ ಆಹಾರ ಇಲಾಖೆಯ ಅಧಿಕಾರಿಗಳು ನಿರ್ಗತಿಕ ಮಹಿಳೆಯ ಕುಟುಂಬಕ್ಕೆ ಪಡಿತರ ಚೀಟಿ ಕಲ್ಪಿಸದೇ ವಂಚಿಸಿದೆ. ವಿಧವೆ ಹಿನ್ನೆಲೆಯಲ್ಲಿ ಮಾಶಾಸನ ಮಂಜೂರಾತಿಗೆ ಕಂದಾಯ ಇಲಾಖೆಗೆ ಅನೇಕ ಬಾರಿ ಅಲೆದು ಪರಿಪರಿಯಾಗಿ ಬೇಡಿಕೊಂಡರೂ ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿ ಮತ್ತು ಕಂದಾಯ ತನಿಖಾಧಿಕಾರಿ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ತಹಸೀಲ್ದಾರ್‌ ಗಮನಕ್ಕೂ ತಂದರೂ ಪ್ರಯೋಜನವಾಗುತ್ತಿಲ್ಲ. ಈಕೆ ವೀರಮ್ಮನಹಳ್ಳಿಯ ವಾಸಿಯಾಗಿದ್ದು ಚುನಾವಣೆ ಗುರ್ತಿನ ಚೀಟಿ ಆಧಾರ್‌ ಕಾರ್ಡ್‌ ಹಾಗೂ ವಾಸಸ್ಥಳ ದೃಡೀಕರಣ ಸೇರಿದಂತೆ ಇತರೆ ಎಲ್ಲಾ ರೀತಿಯ ದಾಖಲೆಗಳಿದ್ದರು. ಅನಾಥ ಬಡ ಮಹಿಳೆಗೆ ಅಶ್ರಯ ಹಾಗೂ ಅನ್ನಭಾಗ್ಯದ ರೇಷನ್ ಕಾರ್ಡ್‌ ಕಲ್ಪಿಸುವತ್ತ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಅರೋಪಿಸಿದ್ದಾರೆ. ಸುನಿತಮ್ಮರ ಕುಟುಂಬ ನಿರ್ವಹಣೆ ಬಾರಿ ಸಂಕಷ್ಟಕ್ಕಿಡಾಗಿದ್ದು ಮಕ್ಕಳನ್ನು ಶಾಲೆಗೆ ಬಿಟ್ಟ ಬಳಿಕ ರೈತರ ಜಮೀನುಗಳಲ್ಲಿ ಕೂಲಿ ತೆರಳಿ ಮಕ್ಕಳನ್ನು ಫೋಷಣೆ ಮಾಡುತ್ತಿದ್ದು ಬಡ ಮಹಿಳೆಯ ಸಂಕಷ್ಷ ಸ್ಥಿತಿ ಕುರಿತು ತಹಸೀಲ್ದಾರ್‌ ಗಮನಕ್ಕೆ ತರಲಾಗಿದೆ. ಈ ಕೂಡಲೇ ಗ್ರಾಪಂನಿಂದ ವಸತಿ ಸೌಲಭ್ಯ ಹಾಗೂ ಪಡಿತರ ಚೀಟಿ ಹಾಗೂ ಮಾಶಾಸನ ಮಂಜೂರಾತಿ ಇತರೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ.

ಕೋಟ್‌

ತಾಲೂಕಿನ ಪಳವಳ್ಳಿ ಗ್ರಾಪಂ ವ್ಯಾಪ್ತಿಯ ವೀರಮ್ಮನಹಳ್ಳಿ ವಾಸಿ ಎಸ್.ಸುನಿತಮ್ಮ ತಮ್ಮ ಮಕ್ಕಳ ಜತೆ ಅತಂತ್ರ ಸ್ಥಿತಿ ವಾಸ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತದ ಬಗ್ಗೆ ಮಾಹಿತಿ ಲಭ್ಯವಾಗಿದ್ದು.ಈ ಬಗ್ಗೆ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಹಾಗೂ ಆರ್‌ಐ ಅವರಿಂದ ವರದಿ ಪಡೆಯಲಾಗಿದೆ. ಕೂಡಲೇ ಆಕೆಗೆ ವಸತಿ ಸೌಲಭ್ಯ ಹಾಗೂ ರೇಷನ್‌ ಕಾರ್ಡ್‌, ಮಾಶಾಸನ ಸೌಲಭ್ಯ ಕಲ್ಪಿಸುವಂತೆ ಆಹಾರ ಇಲಾಖೆ ಶೀರಸ್ತೆದಾರ್‌ ಹಾಗೂ ಗ್ರಾಪಂ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗೆ ಸೂಚಿಸಲಾಗಿದೆ. - ವರದರಾಜು, ತಹಸೀಲ್ದಾರ್‌ ಪಾವಗಡ. ಬಾಕ್ಸ್..

ಮಹಿಳೆಯ ಸ್ಥಿತಿಗತಿ ಕುರಿತು ಮಾಹಿತಿ ಪಡೆದ ಪಾವಗಡ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಜಪಾನಂದ ಸ್ವಾಮೀಜಿ ಮಹಿಳೆಯನ್ನು ಭೇಟಿ ಮಾಡಿ ಆಹಾರ ಧಾನ್ಯ ವಿತರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೇ ಪ್ರತಿ ತಿಂಗಳು ಸಹ ಆಹಾರ ಧಾನ್ಯ ವಿತರಿಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.