ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದ ಕ್ಷೇತ್ರದ ಕಾರ್ಯಕರ್ತರಿಗೆ ಅಮೀನ್ ರೆಡ್ಡಿ ಯಾಳಗಿ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆಂದು ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.2018 ರಲ್ಲಿ ಮೊದಲ ಬಾರಿಗೆ ಜೆಡಿಎಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದ ಅಮೀನ್ ರೆಡ್ಡಿ ಯಾಳಗಿ 23 ಸಾವಿರಕ್ಕೂ ಅಧಿಕ ಮತ ಪಡೆಯುವ ಮೂಲಕ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದ್ದರು. ನಂತರ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಸಾಂಗತ್ಯ ಬೆಳೆಸಿ ಬಿಜೆಪಿಗೆ ಸೇರಿದ ಯಾಳಗಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡು ಕಣಕ್ಕಿಳಿದಿದ್ದರು.
ಯುವ ಪಡೆಯನ್ನು ಕಟ್ಟಿಕೊಂಡು ಚುನಾವಣೆ ಕಣದಲ್ಲಿ ತನ್ನದೇ ಛಾಪು ಮೂಡಿಸಿದ ಚತುರ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ಒಡ್ಡಿ 52 ಸಾವಿರಕ್ಕೂ ಅಧಿಕ ಮತ ಗಳಿಸುವ ಮೂಲಕ ಸೋಲ ಒಪ್ಪಿಕೊಳ್ಳಬೇಕಾಯಿತು.ಸಾಮಾಜಿಕ ಕಾರ್ಯಕ್ಕೆ ಸಿಕ್ಕ ಮನ್ನಣೆ. ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದ ಜನಕ್ಕೆ ಆಹಾರ ಕಿಟ್ ವಿತರಣೆ, ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸುಮಾರು 20ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕ ಮಶೀನ್‌ಗಳನ್ನು ಯಾಳಿಗಿ ಫೌಂಡೇಶನ್ ಮೂಲಕ ದೇಣಿಗೆ ನೀಡಿದ್ದರು. ಅಲ್ಲದೆ ಕ್ಷೇತ್ರದ ಜನತೆಗೆ ಆರೋಗ್ಯ, ಮದುವೆ ಹಾಗೂ ಶವ ಸಂಸ್ಕಾರ ಸೇರಿ ಇನ್ನಿತರ ಕೆಲಸಗಳಿಗೆ ಸಹಕಾರ ನೀಡಿ ಕ್ಷೇತ್ರದ ಜನತೆಯಿಂದ ಶಬ್ಬಾಷ್ ಎನಿಸಿಕೊಂಡರು.
ರಾಜ್ಯದಲ್ಲಿ ಕಳೆದ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ವಿಫಲತೆ ಕಂಡಿದ್ದರ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯದಲ್ಲಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಬೇಕು ಅದು ಬಿಜೆಪಿಯ ಗುರಿ ಮತ್ತು ಉದ್ಧೇಶವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ತಿಳಿಸಿದರು.
ಬಿಎಸ್‌ವೈ ಬಣದಲ್ಲಿ ಗುರುತಿಸಿ ಕೊಂಡಿದ್ದರ ಫಲವಾಗಿ ಅಮೀನ್ ರೆಡ್ಡಿ ಯಾಳಗಿಯವರಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸೂಕ್ತ ಅನ್ನೋದು ಕಾರ್ಯಕರ್ತರ ಅಂಬೋಣ. ಬಿಜೆಪಿ ಸಂಘಟನೆ ಮತ್ತು ಒಗ್ಗಟ್ಟಿನಿಂದ ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.ಜಿಲ್ಲಾಧ್ಯಕ್ಷ ಸ್ಥಾನ ಅನಿರೀಕ್ಷಿತ: ಯಾಳಗಿ
ನನಗೆ ಜಿಲ್ಲಾಧ್ಯಕ್ಷ ಸ್ಥಾನ ಅನಿರೀಕ್ಷಿತವಾಗಿ ಬಂದಿದೆ. ನಾನು ಈ ಹುದ್ದೆಗೆ ಆಕಾಂಕ್ಷಿ ಆಗಿದ್ದಿಲ್ಲ. ಈ ಹುದ್ದೆಯಲ್ಲಿ ಯಾರೇ ಆಯ್ಕೆಯಾಗಿದ್ದರೂ ಅವರ ಜೊತೆ ನಂಬಿಕೆ ವಿಶ್ವಾಸದಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ.ಬಿಜೆಪಿಯಲ್ಲಿ ಯಾವುದೇ ಭಿನ್ನಮತ, ಆಕಾಂಕ್ಷಿಗಳಲ್ಲಿ ಅಸಮಾಧಾನ ಇರುವುದಿಲ್ಲ. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗುತ್ತಿದ್ದಂತೆ ಜಿಲ್ಲೆಯ ಎಲ್ಲಾ ಮುಖಂಡರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಮುಖಂಡರೆಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತೇನೆ.
ಹಿರಿಯರ ಮಾರ್ಗದರ್ಶನ, ಯುವಕರ ಸ್ಫೂರ್ತಿಯೊಂದಿಗೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ, ರಾಜ್ಯ ಸಮಿತಿಯವರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಅಮೀನ್ ರೆಡ್ಡಿ ಯಾಳಗಿ ಅವರು ಕನ್ನಡಪ್ರಭದ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.