ಜೋಶಿಗೆ ಮತ್ತಷ್ಟು ಶಕ್ತಿ ತುಂಬಿದ ಅಮಿತ್‌ ಶಾ ಪ್ರಚಾರ

| Published : May 02 2024, 12:18 AM IST

ಸಾರಾಂಶ

ತಿರಂಗಾ ಹೋರಾಟದ (ಈದ್ಗಾ ಮೈದಾನ) ಮೂಲಕ ರಾಜಕೀಯಕ್ಕೆ ಬಂದ ನೇತಾ ಜೋಶಿ ಅವರು ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಅಭಿವೃದ್ಧಿ ಮಾಡಿದ್ದಾರೆ.

ಹುಬ್ಬಳ್ಳಿ:

ಕರೋನಾ ಸಂದರ್ಭದಲ್ಲಿ ನಮ್ಮೊಂದಿಗೆ ಜಗಳವಾಡಿ ಕರ್ನಾಟಕಕ್ಕೆ ಹೆಚ್ಚಿನ ಲಸಿಕೆ ತಂದುಕೊಟ್ಟ ಆಪದ್ಭಾಂದವ ಪ್ರಹ್ಲಾದ ಜೋಶಿ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ದಿಲ್ಲಿಗೆ ಕಳುಹಿಸಿ, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಇದಕ್ಕಿಂತ ದೊಡ್ಡ ಹುದ್ದೆ ಸಿಗಲಿದೆ....

ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ವೇದಿಕೆಯ ಮಧ್ಯದಲ್ಲಿ ನಿಲ್ಲಿಸಿ ಹೀಗೆ ಬಾಯ್ತುಂಬ ಹೊಗಳುತ್ತಿದ್ದರೆ ನೆರೆದಿದ್ದ ಜನಸ್ತೋಮ ಮೋದಿ ಮೋದಿ, ಜೋಶಿ ಜೋಶಿ, ಜೈ ಶ್ರೀರಾಮ ಜೈ ಶ್ರೀರಾಮ ಎಂದು ದೊಡ್ಡ ದನಿಯಲ್ಲಿ ಘೋಷಣೆ ಕೂಗಿದರು.

ಬುಧವಾರ ಸಂಜೆ ಇಲ್ಲಿನ ನೆಹರು ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದ ಜನಸ್ತೋಮದ ಮುಂದೆ ನಿಂತು ..ಬಡೇ ನೇತಾ ಪ್ರಹ್ಲಾದ್‌ ಜೀ.. ಎಂದು ಸಂಭೋದಿಸಿ ಭಾಷಣ ಆರಂಭಿಸಿದ ಶಾ, ತಿರಂಗಾ ಹೋರಾಟದ (ಈದ್ಗಾ ಮೈದಾನ) ಮೂಲಕ ರಾಜಕೀಯಕ್ಕೆ ಬಂದ ನೇತಾ ಜೋಶಿ ಅವರು ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಅಭಿವೃದ್ಧಿ ಮಾಡಿದ್ದಾರೆ. ನಿಮ್ಮ ಮನೆಗಳಿಗೆ ಕುಡಿಯುವ ನೀರು, ಗ್ಯಾಸ್‌ ಸಂಪರ್ಕ, ಬಡವರಿಗೆ ಸೂರು, ಶೌಚಾಲಯ, ಆರೋಗ್ಯ ವಿಮೆ ಕಲ್ಪಿಸುವ ಮೂಲಕ ಅತಿ ಹೆಚ್ಚು ಸೇವೆ ಮಾಡಿದ್ದಾರೆ. ನಿಮ್ಮ ಬದುಕು ಇನ್ನಷ್ಟು ಹಸನಾಗಲು, ದೇಶದ ಸುರಕ್ಷತೆಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಜೋಶಿ ಅವರನ್ನು ಗೆಲ್ಲಿಸಿ ದಿಲ್ಲಿಗೆ ಕಳಿಸಿ ಎಂದು ಮನವಿ ಮಾಡಿದರು.ಜನತೆಯಿಂದ ವಾಗ್ದಾನ:ಕಾಂಗ್ರೆಸ್‌ ಪಕ್ಷದ ತಪ್ಪುಗಳು, ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅಮಿತ್‌ ಶಾ, ದೇಶ ಮತ್ತು ರಾಜ್ಯದಲ್ಲಿ ಸುಭದ್ರ ಸರ್ಕಾರಕ್ಕಾಗಿ ಪ್ರಧಾನಿ ಮೋದಿ, ಅಭ್ಯರ್ಥಿ ಜೋಶಿಗೆ ಮತ ಹಾಕುವಂತೆ ಜನತೆಯಿಂದ ವಾಗ್ದಾನ ಪಡೆದರು.ಸಭಿಕರಿಗೆ ಎರಡೂ ಕೈಗಳನ್ನು ಎತ್ತಿ ಹಿಡಿಯಲು ಹೇಳಿ ..ಮೋದಿ, ಜೋಶಿ ಅವರನ್ನು ಗೆಲ್ಲಿಸುತ್ತೀರಲ್ಲ?... ಎಂದು ಪ್ರಶ್ನಿಸಿದರು. ಶಾ ಮಾತಿಗೆ ...ಗೆಲ್ಲಿಸುತ್ತೇವೆ... ಎಂದು ಮುಷ್ಟಿ ಬಿಗಿಹಿದು ವಾಗ್ದಾನ ಮಾಡಿದರು. ಇದು ಜೋಶಿ ಅವರಿಗೆ ಮತ್ತಷ್ಟು ಶಕ್ತಿ ತುಂಬಿತು.ನೇಹಾ ಹತ್ಯೆಗೆ ಯಾರು ಹೊಣೆ?

ಕರ್ನಾಟಕ ಮಹಿಳೆಯರಿಗೆ ಸುರಕ್ಷಿತವಲ್ಲ. ಇದಕ್ಕೆ ನೇಹಾ ಹತ್ಯೆಯೇ ಸಾಕ್ಷಿ. ನಿಮಗೆ (ಕರ್ನಾಟಕ) ಮಹಿಳೆಯರಿಗೆ ರಕ್ಷಣೆ ಕೊಡಲು ಆಗದಿದ್ದರೆ ಹೊರಹೋಗಿ ನಾವು ರಕ್ಷಣೆ ನೀಡಿ ತೋರಿಸುತ್ತೇವೆ. ಕರ್ನಾಟಕವನ್ನು ಸುರಕ್ಷಿತ ತಾಣವನ್ನಾಗಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಂಗ್ರೆಸ್‌ ಸರ್ಕಾರಕ್ಕೆ ಛಾಟಿ ಬೀಸಿದರು.ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯಾಯಿತು. ಅದಕ್ಕೆ ಹೊಣೆ ಯಾರು? ಕಾಲೇಜ್‌ ಕ್ಯಾಂಪಸ್‌ನಲ್ಲಿ ಹಾಡಹಗಲೇ ಯುವತಿಯ ಹತ್ಯೆಯಾಗುತ್ತದೆ ಎಂದರೆ ಮಹಿಳೆಯರಿಗೆ ಇಲ್ಲಿ ಎಷ್ಟು ಸುರಕ್ಷತೆ ಇದೆ ಎಂಬುದು ಗೊತ್ತಾಗುತ್ತದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗುತ್ತಾರೆ. ಆದರೆ ಇವರಿಗೆ ಅದು ಕೇಳಿಸುವುದಿಲ್ಲ. ಬೆಂಗಳೂರಲ್ಲಿ ಬಾಂಬ್‌ ಸ್ಫೋಟ ಆಗುತ್ತದೆ. ಅದು ಸಿಲಿಂಡರ್‌ ಸ್ಫೋಟ ಎಂದು ಹೇಳುತ್ತಾರೆ. ಎನ್‌ಐಎ ತನಿಖೆ ಮಾಡಿದ ಮೇಲೆ ಅದು ದುಷ್ಕೃತ್ಯ ಎಂಬುದು ಬೆಳಕಿಗೆ ಬರುತ್ತದೆ. ಇವರೇನು ಮಾಡುತ್ತಿದ್ದಾರೆ? ಕರ್ನಾಟಕ ಸುರಕ್ಷಿತವಾಗಿದೆಯೇ? ನಿಮ್ಮ ಕಡೆಗೆ ಮಹಿಳೆಯರಿಗೆ, ಜನರಿಗೆ ರಕ್ಷಣೆ ಕೊಡಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ಇಳಿಯಿರಿ, ನಾವು ರಕ್ಷಣೆಯನ್ನೂ ನೀಡುತ್ತೇವೆ. ಆಡಳಿತವನ್ನು ನಡೆಸಿ ತೋರಿಸುತ್ತೇವೆ ಎಂದರು.