ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಬಳಸಿರುವ ಅವಾಚ್ಯ ಶಬ್ದಗಳನ್ನು ವಿರೋಧಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು, ದಸಂಸ, ಜನಶಕ್ತಿ, ಮಹಿಳಾ ಮುನ್ನಡೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಸಂಘಟನೆಗಳ ಕಾರ್ಯಕರ್ತರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಶಾಸಕ ಸಿ.ಟಿ.ರವಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಪ್ರತಿಕೃತಿ, ಭಾವಚಿತ್ರಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಡಾ.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಅಮಿತ್ ಶಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಾಚ್ಯ ಶಬ್ಧ ಬಳಸಿರುವ ಸಿ.ಟಿ.ರವಿ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು, ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವೆಂಕಟಗಿರಿಯಯ್ಯ ನೇತೃತ್ವದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು, ಗುರು ಪ್ರಸಾದ್ ಕೆರಗೋಡು ನೇತೃತ್ವದಲ್ಲಿ ದಸಂಸ, ಮಹಿಳಾ ಮುನ್ನಡೆ, ಜನಶಕ್ತಿ ಕಾರ್ಯಕರ್ತರು ಭಾಗವಹಿಸಿದ್ದರು.
ಶಾ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್‌ಗಿಲ್ಲ: ಸಿ.ಟಿ.ಮಂಜುನಾಥ್ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸಭೆಯಲ್ಲಿ ಅಮಿತ್ ಶಾ ಹೇಳಿರುವ ಮಾತುಗಳನ್ನು ತುಂಡರಿಸಿ ತಮಗಿಷ್ಟಬಂದಂತೆ ತಿರುಚಿ ವೈರಲ್ ಮಾಡಿರುವ ಕಾಂಗ್ರೆಸ್‌ಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ತಿಳಿಸಿದ್ದಾರೆ.ಅಂಬೇಡ್ಕರ್ ಸೇವೆಯನ್ನು ಬಳಸಿಕೊಂಡ ಕಾಂಗ್ರೆಸ್ ಪಕ್ಷ ಅವರಿಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಚುನಾವಣೆಗೆ ನಿಂತಾಗ ಸಂಚು ಮಾಡಿ ಸೋಲಿಸಿದ್ದರು. ಅಂಬೇಡ್ಕರ್ ಮೃತ ದೇಹವನ್ನು ದೆಹಲಿಯಲ್ಲಿ ಸಂಸ್ಕಾರ ಮಾಡಲೂ ಬಿಡದೆ ತುಂಡು ಜಾಗವನ್ನೂ ನೀಡದೆ ಅವಮಾನಿಸಿದರು. ಈಗ ದಿಢೀರನೇ ಅಂಬೇಡ್ಕರ್ ಮೇಲೆ ಪ್ರೀತಿ ಉಕ್ಕಿಬರುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವ್ಯಂಗ್ಯವಾಡಿದ್ದಾರೆ.
ಅಂಬೇಡ್ಕರ್ ಅವರಿಗೆ ಅತ್ಯಂತ ಗೌರವ ಸಲ್ಲಿಸಲು ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಬೇಕಾಯಿತು. ಅಂಬೇಡ್ಕರ್ ಓದಿದ ಜಾಗ, ಪರಿನಿರ್ವಾಣವಾಗಿದ್ದು, ಅಂತ್ಯಕ್ರಿಯೆ ನಡೆಸಿದ್ದು ಜನ್ಮಭೂಮಿ ಸೇರಿದಂತೆ ಪಂಚತೀರ್ಥಗಳನ್ನಾಗಿ ಅಭಿವೃದ್ಧಿಪಡಿಸಿದೆ. ಇದನ್ನು ಕಾಂಗ್ರೆಸ್ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.ಕಾಂಗ್ರೆಸ್ ನಿರಂತರವಾಗಿ ಅಂಬೇಡ್ಕರ್‌ಗೆ ಅವಮಾನ ಮಾಡುತ್ತಲೇ ಬಂದಿದೆ. ಈಗ ಅವರು ರಚಿಸಿರುವ ಸಂವಿಧಾನ ಹಿಡಿದು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಾಸ್ಪದ. ಅಂತಾರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪಿತ್ರೋಡ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರವರಿಗಿಂತ ನೆಹರು ಪಾತ್ರವೇ ದೊಡ್ಡದು ಎಂದಿದ್ದರು. ಇದು ಅಪಮಾನವಲ್ಲವೆ ಎಂದು ಕುಟುಕಿದ್ದಾರೆ.
ಇನ್ನಾದರೂ ಇಂತಹ ಗೊಂದಲದ ವಾತಾವರಣವನ್ನು ಸೃಷಿಸದೆ ದೇಶದ ಅಭಿವೃದ್ಧಿಗೆ ಕೈಜೋಡಿಸಲಿ, ಇಲ್ಲದಿದ್ದಲ್ಲಿ ಕಾಂಗ್ರೆಸ್‌ಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.