ಸಾರಾಂಶ
ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಗೃಹಖಾತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಹಗರಿಬೊಮ್ಮನಹಳ್ಳಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿಪಿಎಂ ತಾಲೂಕು ಪದಾಧಿಕಾರಿಗಳು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹಖಾತೆ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ಕುರಿತು ಪಕ್ಷದ ರಾಜ್ಯ ಸಮಿತಿ ಸದಸ್ಯ ಆರ್.ಎಸ್.ಬಸವರಾಜ ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಹಗರುವಾಗಿ ಮಾತನಾಡಿರುವುದು ಸಮಂಜಸವಲ್ಲ. ದೇಶಕ್ಕೆ ವಿಶ್ವಮಾನ್ಯವಾದ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಲಘು ಹೇಳಿಕೆ ನೀಡಿರುವುದು ಅವರ ಮನುಸ್ಮೃತಿ ಆರಾಧನೆಯನ್ನು ತೋರುವಂತಿದೆ. ಅಮಿತ್ ಶಾ ಅವರಿಗೆ ಕೇಂದ್ರ ಸಚಿವರಾಗಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಕ್ಷದ ತಾಲೂಕು ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಗೃಹಖಾತೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಹಿರಂಗವಾಗಿ ಅಂಬೇಡ್ಕರ್ ಅನುಯಾಯಿಗಳ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರಾದ ಎಸ್.ಜಗನ್ನಾಥ್, ಕೆ.ಗಾಳೆಪ್ಪ, ಕೆ.ರಮೇಶ್, ಪಿ.ಚಾಂದಬಿ, ಎಚ್.ಹುಲುಗಪ್ಪ, ರೇಣುಕಾ, ಸಂತ ಶಿಶುನಾಥ ಶರೀಫ್ ವೇದಿಕೆಯ ಅಧ್ಯಕ್ಷ ಸೈಯದ್ ಇರ್ಫಾನ್ ಇದ್ದರು. ಬಳಿಕ ಅಮಿತ್ ಶಾ ಅವರ ಭಾವಚಿತ್ರ ಹರಿದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಂಬೇಡ್ಕರ್ ಅವರ ಭಾವಚಿತ್ರದ ಪ್ರದರ್ಶನ ನಡೆಸಿದರು.ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿಪಿಎಂ ತಾಲೂಕು ಪದಾಧಿಕಾರಿಗಳು ಕೇಂದ್ರ ಗೃಹಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.