ಅಮಿತ್‌ ಶಾ ಕುರುಬ ಸಮಾಜ ಕಡೆಗಣಿಸಿ ಮಾತನಾಡಿಲ್ಲ: ಜೋಶಿ

| Published : Apr 02 2024, 01:07 AM IST

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿಲ್ಲ. ಕುರುಬ ಸಮುದಾಯವನ್ನು ಬಿಜೆಪಿಯಿಂದ ದೂರ ಮಾಡಲು ವಿರೋಧಿಗಳು ಹೂಡಿದ ತಂತ್ರ.

ಹುಬ್ಬಳ್ಳಿ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿಲ್ಲ. ಕುರುಬ ಸಮುದಾಯವನ್ನು ಬಿಜೆಪಿಯಿಂದ ದೂರ ಮಾಡಲು ವಿರೋಧಿಗಳು ಹೂಡಿದ ತಂತ್ರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ, ಕಾರ್ಯಕರ್ತರೊಬ್ಬರು "ಅಮಿತ್ ಶಾ ಅವರು ಕುರುಬ ಸಮಾಜವನ್ನು ಕಡೆಗಣಿಸಿ ಮಾತನಾಡಿದ್ದಾರೆ " ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎನ್ನುತ್ತಿದ್ದಂತೆ ಜೋಶಿ ಅಚ್ಚರಿ ವ್ಯಕ್ತಪಡಿಸಿದರು. ಅಮಿತ್‌ ಶಾ ಯಾವ ಸಭೆಯಲ್ಲೂ ಹಾಗೆ ಹೇಳಿಲ್ಲ. ಅದೆಲ್ಲ ಸುಳ್ಳು. ನಾನೂ ಆ ಸಭೆಯಲ್ಲಿ ಇದ್ದೆ. ಚಾಲೆಂಜ್ ಮಾಡಿ ಹೇಳುತ್ತೇನೆ. ಅವರು ಹಾಗೆ ಹೇಳಿಯೇ ಇಲ್ಲವೆಂದು ಸ್ಪಷ್ಟಪಡಿಸಿದರು.

ಕುರುಬ ಸಮುದಾಯದವರು ಸದಾ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಈಗ ಆ ಸಮುದಾಯದವರೇ ಸಿಎಂ ಇದ್ದಾರೆ. ಸಹಜವಾಗಿ ತಮ್ಮ ಸಮಾಜದವರನ್ನು ಸೆಳೆಯಲು ಯತ್ನಿಸಬಹುದು. ಬಿಜೆಪಿ ಬೆಂಬಲಿತ ಆ ಸಮುದಾಯವನ್ನು ಬಿಟ್ಟುಕೊಡಬೇಡಿ ಎಂದು ಶಾ ನಮಗೆ ಸಲಹೆ ಮಾಡಿದರು. ಇದು ಸತ್ಯ ಸಂಗತಿ. ಮಿಕ್ಕಿದ್ದೆಲ್ಲ ಮಿತ್ಯ ಎಂದು ಸಮಜಾಯಿಷಿ ನೀಡಿದರು.

ಯಲಿವಾಳದಲ್ಲಿ ಸಭೆ:

ಸಂಜೆ ವೇಳೆಗೆ ಯಲಿವಾಳ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಬಹಿರಂಗ ಪ್ರಚಾರ ನಡೆಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಹತ್ತು ವರ್ಷ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ನಯಾ ಪೈಸೆ ಭ್ರಷ್ಟಾಚಾರ ಮಾಡಿಲ್ಲ ಎಂದು ತಿಳಿಸಿದರು. ಮೋದಿ ಹತ್ತು ವರ್ಷದ ಆಡಳಿತದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡಲು ಶುರು ಮಾಡಿದ್ದು, ದೇಶದಲ್ಲಿ ಪರಿವರ್ತನೆ ಸಾಧ್ಯವಾಗಿದೆ ಎಂದು ಪ್ರತಿಪಾದಿಸಿದರು.

ಕೇಂದ್ರ ಸರ್ಕಾರದ ಯಾವುದೇ ಹಂತದಲ್ಲಿ, ರಾಜಕಾರಣದಲ್ಲಿ ಸಹ ಒಂದು ಪೈಸೆ ಭ್ರಷ್ಟಾಚಾರವನ್ನು ನಾವು ಯಾರೂ ಮಾಡಿಲ್ಲ ಎಂದು ಘಂಟಾ ಘೋಷವಾಗಿ ಹೇಳಿದರು. ತಮ್ಮ ಸಂಪುಟದ ಯಾರೊಬ್ಬ ಮಂತ್ರಿಯೂ ಭ್ರಷ್ಟಾಚಾರ ಮಾಡಿದರೆ ಅವತ್ತೇ ಸಂಜೆ ಮನೆಗೆ ಕಳಿಸುತ್ತಾರೆ. ಅಷ್ಟರ ಮಟ್ಟಿಗೆ ಸ್ವಚ್ಛ ಆಡಳಿತ ನೀಡಿದ್ದೇವೆ ಎಂದು ನುಡಿದರು.

ಪ್ರಚಾರ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಕ್ಷದ ಪ್ರಮುಖರಾದ ಸಂತೋಷ ಚವ್ಹಾಣ, ಲಿಂಗರಾಜ ಪಾಟೀಲ್, ಮೇಯರ್‌ ವೀಣಾ ಭಾರದ್ವಾಡ, ದತ್ತಮೂರ್ತಿ ಕುಲಕರ್ಣಿ ಇದ್ದರು.