ಸಾರಾಂಶ
- ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಎಂ. ಗುರುಮೂರ್ತಿ ಆಕ್ರೋಶ
----ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಡಾ. ಬಾಬಾ ಸಾಹೇಬರು ನೀಡಿರುವ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಮಿತ್ ಶಾ, ಅಂಬೇಡ್ಕರ್ ಬಗ್ಗೆ ಹಗುರವಾಗಿ ಮತ್ತು ಕೀಳಾಗಿ ಮಾತನಾಡಿರುವುದು ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಮಾಡಿರುವ ಅಪಮಾನವಾಗಿದೆ. ಕೋಮುವಾದಿಗಳು ಯಾವಾಗಲೂ ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇರೊಂದು ಇಲ್ಲ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಹೇಳಿದರು.ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ, ಕೃಷ್ಣಪ್ಪ ಸ್ಥಾಪಿತ) ಯ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮತನಾಡಿದರು.
ಸಂವಿಧಾನದ ಸವಲತ್ತಿನ ಮೂಲಕವೇ ಕೇಂದ್ರ ಗೃಹ ಸಚಿವ ಸ್ಥಾನದ ಅಧಿಕಾರ ಅನುಭವಿಸುತ್ತಿರುವ ಅಮಿತ್ ಶಾ ಅವರು, ಆ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಹೊಂದಿಲ್ಲ ಎಂದು ದೂರಿದರು.ಅಂಬೇಡ್ಕರ್ ಎನ್ನುವ ವ್ಯಕ್ತಿ ಭಾರತದಲ್ಲಿ ಹುಟ್ಟದೆ ಹೋಗಿದ್ದರೆ, ಸಂವಿಧಾನವನ್ನು ಬರೆಯದೆ ಹೋಗಿದ್ದರೆ ನೀವು ಈ ದೇಶದ ಗೃಹ ಮಂತ್ರಿ ಆಗಲು ಸಾಧ್ಯವಿತ್ತಾ ಎಂದು ಅಮಿತ್ ಶಾ ಅವರನ್ನು ಪ್ರಶ್ನಿಸಿದ ಗುರುಮೂರ್ತಿ, ಅಮಿತ್ ಶಾ ಅವರು ಆಡುವ ಮಾತುಗಳು, ಬಳಸುವ ಪದಗಳನ್ನು ಗಮನಿಸಿದರೆ "ಮನುಸ್ಮೃತಿ "ಯನ್ನು ಮತ್ತೊಮ್ಮೆ ಈ ದೇಶದಲ್ಲಿ ಜಾರಿಗೊಳಿಸುವ ಹುನ್ನಾರ ಇರಬಹುದು ಎಂದು ಕಿಡಿಕಾರಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂಬೇಡ್ಕರ್ ಅವರ ಬಗ್ಗೆ ಗೌರವವಿದ್ದರೆ ತಕ್ಷಣವೇ ಕೇಂದ್ರ ಗೃಹಸಚಿವ ಅಮಿತ್‍ಶಾರವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಎಂ. ಎಳುಕೋಟಿ, ಜಿಲ್ಲಾ ಸಂಘಟನಾ ಸಂಚಾಲಕ ತಮ್ಮಯ್ಯ, ಮುಖಂಡರಾದ ಶ್ರೀಕಾಂತ್ ಚಿಕ್ಕಮರಡಿ, ಚಂದ್ರಪ್ಪ ಜೋಗಿ, ನಾಗರಾಜ್, ನಾಗರಾಜ್ ಸಾಗರ, ಚಂದ್ರಪ್ಪ ಸಾಗರ, ಅಂಜನಪ್ಪ ಸೇರಿದಂತೆ ಮತ್ತಿತರರು ಇದ್ದರು.
-----22ಎಸ್‌ಎಂಜಿಕೆಪಿ05
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.