ಪಶ್ಚಿಮ ವಲಯ ನೂತನ ಡಿಐಜಿ ಆಗಿ ಅಮಿತ್‌ ಸಿಂಗ್‌ ಅಧಿಕಾರ ಸ್ವೀಕಾರ

| Published : Jan 02 2024, 02:15 AM IST

ಪಶ್ಚಿಮ ವಲಯ ನೂತನ ಡಿಐಜಿ ಆಗಿ ಅಮಿತ್‌ ಸಿಂಗ್‌ ಅಧಿಕಾರ ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

2007ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಮಿತ್‌ ಸಿಂಗ್‌, 2009ರಿಂದ 2011ರಲ್ಲಿ ಎಎಸ್ಪಿಯಾಗಿ ಮಂಗಳೂರು, ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2011ರಿಂದ ಹಾಸನ ಎಸ್ಪಿಯಾಗಿ, ಬಳಿಕ ಗುಲ್ಬರ್ಗ, ಬೆಂಗಳೂರು ಗ್ರಾಮಾಂತರದಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾತ್ರವಲ್ಲದೆ, ನಾಲ್ಕು ವರ್ಷಗಳ ಕಾಲ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹೆಚ್ಚುತ್ತಿರುವ ಡ್ರಗ್ಸ್‌ ಪ್ರಕರಣಗಳನ್ನು ಸಹಿಸಲಾಗದು. ಕೋಮು ಸಂಬಂಧಿ ಕೃತ್ಯಗಳು, ನೈತಿಕ ಪೊಲೀಸ್‌ಗಿರಿ ಸಹಿತ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು, ಕಾನೂನು ಸುವ್ಯವಸ್ಥೆ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಪಶ್ಚಿಮ ವಲಯದ ನೂತನ ಡಿಐಜಿ ಅಮಿತ್‌ ಸಿಂಗ್‌ ಹೇಳಿದ್ದಾರೆ.

ಮಂಗಳೂರಿನ ತಮ್ಮ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕರಾವಳಿಯಲ್ಲಿ ಡ್ರಗ್ಸ್‌ ಹಾವಳಿ ತುಸು ಹೆಚ್ಚೇ ಇದೆ. ಇದನ್ನು ಸಹಿಸಲಾಗದು. ಮುಖ್ಯವಾಗಿ ನಗರ ಭಾಗದಲ್ಲಿ ಡ್ರಗ್ಸ್‌ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಮಾದಕ ವಸ್ತುಗಳು ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಇದರ ಬಗ್ಗೆ ಜಾಗೃತವಾಗಿದ್ದು ಕ್ರಮ ವಹಿಸಲಾಗುವುದು ಎಂದು ಅಮಿತ್‌ ಸಿಂಗ್‌ ಹೇಳಿದರು.

ಕರಾವಳಿ ಭಾಗ ಕೋಮು ಸೂಕ್ಷ್ಮ ಪ್ರದೇಶ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಇಂತಹ ಪ್ರಕರಣಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ. ಕೋಮು ಸಂಬಂಧಿ ಪ್ರಕರಣಗಳನ್ನು ಸಕ್ರಿಯವಾಗಿ, ಜಾಗರೂಕತೆಯಿಂದ ನಿಭಾಯಿಸುವ ಅಗತ್ಯವಿದೆ. ಈ ಬಗ್ಗೆ ನಾವು ಅಲರ್ಟ್‌ ಆಗಿದ್ದೇವೆ. ಗುಪ್ತಚರ ವಿಭಾಗವನ್ನು ಮತ್ತಷ್ಟು ಜಾಗೃತಗೊಳಿಸಿ ಕೋಮು ಸಂಬಂಧಿ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲಾಗುವುದು. ತಲೆಮರೆಸಿಕೊಂಡಿರುವವರ ಪತ್ತೆಗೆ ಕೂಡ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.

ಅನೈತಿಕ ಪೊಲೀಸ್‌ಗಿರಿ ವಿರುದ್ಧವೂ ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ. ನಾನು ಎಎಸ್‌ಪಿಯಾಗಿದ್ದಾಗಲೂ ಅನೈತಿಕ ಪೊಲೀಸ್‌ಗಿರಿಯ ಘಟನೆಗಳಿದ್ದವು ಎಂದವರು ಹೇಳಿದರು.

ನಾನು ದಶಕದ ಹಿಂದೆ ಮಂಗಳೂರು ಮತ್ತು ಪುತ್ತೂರಿನಲ್ಲಿ ಎಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದೆ. ಇದೀಗ ಮತ್ತೆ ಮರಳಿ ಕರಾವಳಿಗೆ ಬಂದಿರುವುದು ಮರಳಿ ತವರಿಗೆ ಬಂದ ಅನುಭವ. ಹಿಂದಿನ ಮಂಗಳೂರಿಗೂ ಈಗಿನ ಮಂಗಳೂರಿಗೂ ಬಹಳಷ್ಟು ಬದಲಾವಣೆಯಾಗಿದೆ. ಇಲ್ಲಿನ ಅಪರಾಧ ಪ್ರಕರಣಗಳಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಸೈಬರ್‌ ಕ್ರೈಮ್‌ನಂತಹ ವೈಟ್‌ ಕಾಲರ್‌ ಅಪರಾಧಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಎಸ್‌ಪಿ, ಇನ್ಸ್‌ಪೆಕ್ಟರ್‌ಗಳ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅಮಿತ್‌ ಸಿಂಗ್‌, ಸೈಬರ್‌ ಕ್ರೈಂಗಳು ಹೆಚ್ಚುತ್ತಿರುವ ಬಗ್ಗೆ ಜನರು ಕೂಡ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌, ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕುಮಾರ್‌ ಇದ್ದರು. ಈ ಮೊದಲು ಪಶ್ಚಿಮ ವಲಯ ಡಿಐಜಿಯಾಗಿದ್ದ ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.