ಮುಂದಿನ ವರ್ಷ ಜ. 15ರಂದು ನಡೆಯುವ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ಅಮಿತಾಬ್‌ ಬಚ್ಚನ್‌ಗೆ ಆಹ್ವಾನ

| Published : Nov 16 2024, 12:37 AM IST / Updated: Nov 16 2024, 12:16 PM IST

ಮುಂದಿನ ವರ್ಷ ಜ. 15ರಂದು ನಡೆಯುವ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ಅಮಿತಾಬ್‌ ಬಚ್ಚನ್‌ಗೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ವರ್ಷ ಜ. 15ರಂದು ನಡೆಯುವ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಖ್ಯಾತ ನಟ ಅಮಿತಾಬ್‌ ಬಚ್ಚನ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ

ಕೊಪ್ಪಳ: ಮುಂದಿನ ವರ್ಷ ಜ. 15ರಂದು ನಡೆಯುವ ಗವಿಸಿದ್ಧೇಶ್ವರ ಮಹಾರಥೋತ್ಸವಕ್ಕೆ ಖ್ಯಾತ ನಟ ಅಮಿತಾಬ್‌ ಬಚ್ಚನ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಗವಿಸಿದ್ಧೇಶ್ವರ ಜಾತ್ರೆಯ ರಥೋತ್ಸವ ಜ. 15, 2024ರಂದು ನಡೆಯಲಿದ್ದು, ಅಮಿತಾಬ್‌ ಬಚ್ಚನ್ ಅವರಿಗೆ ಆಹ್ವಾನ ನೀಡಲಾಗಿದೆ. ಮುಂಬೈನ ಅವರ ನಿವಾಸಕ್ಕೆ ಶ್ರೀ ಗವಿಮಠದ ಪರವಾಗಿ ವಾಣಿಜ್ಯೋದ್ಯಮಿ ಅಶ್ವಿನ್ ಜಾಂಗಡ್ ಹಾಗೂ ಇತರರು ತೆರಳಿ ಜಾತ್ರೆಯ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ. ಗವಿಸಿದ್ಧೇಶ್ವರ ಜಾತ್ರೆಯ ಕುರಿತು ಈಗಾಗಲೇ ಮಾಹಿತಿ ಹೊಂದಿದ್ದ ಅವರೇ ಜಾತ್ರೆಯ ದಾಸೋಹ, ಸೇರುವ ಜನಸ್ತೋಮ ಸೇರಿದಂತೆ ಮೊದಲಾದ ವಿಷಯಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಆಹ್ವಾನ ಸ್ವೀಕಾರ ಮಾಡಿರುವ ಅವರು, ಆರೋಗ್ಯದ ಸಮಸ್ಯೆ ಇರುವುದರಿಂದ ಈಗಲೇ ಖಚಿತಪಡಿಸಲು ಆಗುವುದಿಲ್ಲ. ಆದರೆ, ಬರುವುದಕ್ಕೆ ಇಚ್ಛೆಯಂತೂ ಇರುವುದಾಗಿ ಹೇಳಿದ್ದಾರೆ.

ತಂಡದಿಂದ ಮಾಹಿತಿ

ಅಮಿತಾಬ್‌ ಬಚ್ಚನ್ ಅವರಿಗೆ ಪ್ರತ್ಯೇಕ ತಂಡವಿದ್ದು, ಆ ತಂಡ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಕುರಿತು ಸಮಗ್ರವಾಗಿ ಅಧ್ಯಯನ ಮಾಡಿ, ಭದ್ರತೆಯ ಕುರಿತು ಸಮಗ್ರವಾಗಿ ಪರಿಶೀಲನೆ ಮಾಡಿದ ಬಳಿಕವೇ ಅವರು ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ಆಗಮಿಸುವ ಕುರಿತು ನಿರ್ಧಾರವಾಗಲಿದೆ.

ಈ ಹಿಂದೆ ಸದ್ಗುರು ಅವರು ಆಗಮಿಸುವ ಪೂರ್ವದಲ್ಲಿಯೂ ಮೂರು ಬಾರಿ ಅವರ ತಂಡ ಶ್ರೀ ಗವಿಮಠಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ ಬಳಿಕವೇ ಆಗಮಿಸುವ ಕುರಿತು ಖಚಿತ ಪಡಿಸಿದ್ದರು. ಹೀಗಾಗಿ, ಅಮಿತಾಬ್‌ ಬಚ್ಚನ್ ಅವರ ತಂಡ ಬಂದು, ಇಲ್ಲಿಯ ಸಮಗ್ರ ಮಾಹಿತಿ ಮತ್ತು ಭದ್ರತೆ ಕುರಿತು ಪರಿಶೀಲನೆ ನಡೆಸಿದ ಆನಂತರ ಅವರು ಬರಲಿದ್ದಾರೆ ಎನ್ನುವ ವಿಶ್ವಾಸ ಶ್ರೀಮಠದ್ದಾಗಿದೆ.