ಸಾರಾಂಶ
- ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹ । ಫೆ.6ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನೂರಾರು ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಚನ್ನಗಿರಿಯ ಅಮರ್ ಮೆಡಿಕಲ್ ಶಾಪ್‌ನ ಅಮ್ಜದ್ ಪ್ರಕರಣವನ್ನು ಸರ್ಕಾರ, ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಅಮ್ಜದ್ ಲೈಂಗಿಕ ದೌರ್ಜನ್ಯ ನಡೆಸಿದ 100ಕ್ಕೂ ಅಧಿಕ ವಿಡಿಯೋ ತುಣುಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 56 ವರ್ಷದ ಆರೋಪಿ ತನ್ನ ಮೆಡಿಕಲ್ ಶಾಪ್‌ನಲ್ಲಿ ರಾಕ್ಷಸೀಕೃತ್ಯದ ಹಿಂದೆ ವ್ಯವಸ್ಥಿತ ಸಂಘಟನೆಗಳು ಇರುವ ಶಂಕೆ ಇದೆ. ಹಾಗಾಗಿ, ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಆರೋಪಿ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಮ್ಜದ್ ಪರ ಯಾರೂ ವಕಾಲತ್ತು ವಹಿಸಬಾರದು ಹಾಗೂ ಜಾಮೀನು ನೀಡಬಾರದು. ಒಂದುವೇಳೆ ಆಮಿಷಕ್ಕೊಳಗಾಗಿ ಅಮ್ಜದ್ ರಕ್ಷಣೆಗೆ ನಿಂತರೆ, ಅವರ ಮನೆ ಹೆಣ್ಣುಮಕ್ಕಳ ಮೇಲೂ ಅಮ್ಜದ್ ಕಣ್ಣು ಹಾಕುತ್ತಾನೆ ಎಂಬುದು ನೆನಪಿರಲಿ ಎಂದು ಎಚ್ಚರಿಸಿದರು.ಅಮ್ಜದ್ ಪ್ರಕರಣ ಕುರಿತಾಗಿ ಆತನ ಮೊದಲ ಹೆಂಡತಿ 2 ವರ್ಷದ ಹಿಂದೆಯೇ ಈ ರೀತಿಯ ಅತ್ಯಾಚಾರ ಪ್ರಕರಣಗಳಲ್ಲಿ ತನ್ನ ಪತಿ ಇದ್ದ ಬಗ್ಗೆ ದೂರು ನೀಡಿದ್ದರು. ಆಗ ಈ ವ್ಯಕ್ತಿ ಬಗ್ಗೆ ತನಿಖೆ ನಡೆಸಿದ್ದರೆ ಕಾಮಪುರಾಣ ಬಯಲಾಗುತ್ತಿತ್ತು. ಆದರೆ, ಅಂದು ಪೊಲೀಸರು ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳದೇ ರಾಜಿ ಸಂಧಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಷ್ಟೆಲ್ಲಾ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಹಾಗಾಗಿ, ಶ್ರೀರಾಮ ಸೇನೆಯು ಸರ್ಕಾರಕ್ಕೆ 4 ಬೇಡಿಕೆಗಳನ್ನು ಇಟ್ಟಿದೆ. ಅದರಂತೆ ಅಮ್ಜದ್ ಪ್ರಕರಣದ ಸಮಗ್ರ ತನಿಖೆಯಾಗಬೇಕು, ಆರೋಪಿ ಪರಾರಿಯಾಗಲು ಸಹಕರಿಸಿದವರ ಬಂಧಿಸಿ ತನಿಖೆ ನಡೆಸಬೇಕು, ನ್ಯಾಯಾಲಯ ತಕ್ಷಣ ಪ್ರಕರಣ ಪರಿಶೀಲಿಸಿ ಆರೋಪಿಗೆ ಗಲ್ಲು ವಿಧಿಸಬೇಕು ಜತೆಗೆ ಸಂತ್ರಸ್ಥ ಮಹಿಳೆಯರ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಪರಶುರಾಮ ನಡುಮನಿ, ಜಿಲ್ಲಾಧ್ಯಕ್ಷ ಮಣಿಸರ್ಕಾರ್, ಚನ್ನಗಿರಿಯ ವಿನಯ್ ಪವಾರ್, ನಿತೀನ್, ಪಿ. ಸಾಗರ್, ಶ್ರೀಧರ್, ಶಿವಪೂಜಾರ್, ಅಜಯ್, ಪ್ರಭು ಇದ್ದರು.
- - -ಬಾಕ್ಸ್ * ನಾಟಕ ಮಾಡುವ ಸಿಎಂ ಸಿದ್ದರಾಮಯ್ಯ
2014ರಿಂದ 2019ರ ವರೆಗೆ ರಾಜ್ಯದಲ್ಲಿ ಒಟ್ಟು 21 ಸಾವಿರ ಯುವತಿಯರು ನಾಪತ್ತೆಯಾಗಿದ್ದಾರೆ ಜತೆಗೆ, 2022, 2023, 2024ರಲ್ಲಿ ಒಟ್ಟು 1366 ಅಪ್ರಾಪ್ತೆಯರು ಗರ್ಭವತಿಯಾಗಿದ್ದಾರೆ. ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ನಡೆದು 9 ತಿಂಗಳಾದರೂ ಆರೋಪಿಗೆ ಸಜೆಯಾಗಿಲ್ಲ. ಸಿಎಂ ಸಿದ್ದರಾಮಯ್ಯ ನಾಟಕ ಮಾಡುತ್ತಾ ಕಾಲ ದೂಡುತ್ತಿದ್ದಾರೆ. ರಾಜ್ಯದಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದ್ದು, ಸರ್ಕಾರ ಇದೆಯೋ? ಇಲ್ಲವೋ? ತಿಳಿಯುತ್ತಿಲ್ಲ. ಚನ್ನಗಿರಿ ಪ್ರಕರಣ ಖಂಡಿಸಿ ಜ.6 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಮ್ಜದ್ ವಿರುದ್ಧ ಶ್ರೀರಾಮ ಸೇನೆ ಸೇರಿದಂತೆ ಎಲ್ಲ ಹಿಂದುಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮುತಾಲಿಕ್ ತಿಳಿಸಿದರು.- - -
-2ಕೆಡಿವಿಜಿ31.ಜೆಪಿಜಿ:ಅಮ್ಜದ್ ಪ್ರಕರಣವನ್ನು ಸರ್ಕಾರ, ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.