ಸಾರಾಂಶ
ಲೈಂಗಿಕವಾಗಿ ಬಳಸಿ ವಿಡಿಯೋ ಮಾಡ್ತಿದ್ದ ಆರೋಪಿ । ಪೊಲೀಸರಿಂದ ಸುಮೋಟೋ ಪ್ರಕರಣ । ಆರೋಪಿ ಮೊಬೈಲಲ್ಲಿ 60 ಅಶ್ಲೀಲ ವಿಡಿಯೋ
ಕನ್ನಡಪ್ರಭ ವಾರ್ತೆ ದಾವಣಗೆರೆಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಪ್ರಕರಣಗಳನ್ನೇ ನೆನಪಿಸುವಂತಹ ಕೃತ್ಯವು ಚನ್ನಗಿರಿ ಪಟ್ಟಣದಲ್ಲಿ ವರದಿಯಾಗಿದೆ. ಈ ಸಂಬಂಧ ಔಷಧಿ ಅಂಗಡಿ ಮಾಲೀಕನೊಬ್ಬನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯ ವಾಸಿ, ಚನ್ನಗಿರಿ ಪಟ್ಟಣದಲ್ಲಿ ಔಷಧಿ ಅಂಗಡಿ ನಡೆಸುತ್ತಿರುವ ಅಮ್ಜದ್ (56) ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿ, ಬಂಧಿಸಿದ್ದಾರೆ. ಅಪ್ರಾಪ್ತೆಯರು, ಯುವತಿಯರು, ಮಹಿಳೆಯರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ಅಶ್ಲೀಲ ವಿಡಿಯೋ ಮಾಡಿಕೊಳ್ಳುತ್ತಿದ್ದ ಆರೋಪಿ ಮೊಬೈಲ್, ಕಂಪ್ಯೂಟರ್ ಸಿಸ್ಟಂನಲ್ಲಿ ಸುಮಾರು 50-60ಕ್ಕೂ ಹೆಚ್ಚು ಇಂತಹ ದೃಶ್ಯ ಪತ್ತೆಯಾಗಿವೆ ಎಂದು ಗೊತ್ತಾಗಿದೆ.ಸ್ನಾನ ಮಾಡುವ ಅಪ್ರಾಪ್ತೆಯರು, ಯುವತಿಯರು, ಗೃಹಿಣಿಯರ ವಿಡಿಯೋಗಳನ್ನು ಸದ್ದಿಲ್ಲದೇ ಕದ್ದು ಮುಚ್ಚಿ ಮಾಡುವುದು, ಬಸ್ಸಿನಲ್ಲಿ ಪ್ರಯಾಣಿಸುವ, ಚನ್ನಗಿರಿ ಪಟ್ಟಣದ ಮೇಲಿನ ಬಸ್ ನಿಲ್ದಾಣದ ಬಳಿ ತನ್ನ ಔಷಧಿ ಅಂಗಡಿ ಎದುರಿನ ಲ್ಯಾಬ್‌ಗೆ, ತನ್ನ ಔಷಧಿ ಅಂಗಡಿಗೆ ಬಂದ ಮಹಿಳೆಯರು, ಯುವತಿಯರು, ಅಪ್ರಾಪ್ತೆಯರ ವಿಡಿಯೋಗಳನ್ನು ಮಾಡಿಕೊಂಡು, ವಿಕೃತ ಖುಷಿ ಅನುಭವಿಸುತ್ತಿದ್ದ ಮನಸ್ಥಿತಿ ಮೈಗೂಡಿಸಿಕೊಂಡಿದ್ದ ಎಂದು ಹೇಳಲಾಗಿದೆ.
ಅಪ್ರಾಪ್ರೆಯರು, ಯುವತಿಯರು, ಮಹಿಳೆಯರ ದೇಹದ ಭಾಗಗಳನ್ನು ಚಿತ್ರೀಕರಣ ಮಾಡಿಕೊಂಡು, ವಿಕೃತ ಖುಷಿಪಡುತ್ತಿದ್ದ ಅಮ್ಜದ್ ಸಜ್ಜನನಂತೆ ವರ್ತಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರೇ ಇಂತಹವನ ಜಾಲಕ್ಕೆ ಸಿಲುಕಿರುವ ನತದೃಷ್ಟರು. ಸುಮಾರು 30ಕ್ಕೂ ಹೆಚ್ಚು ಮಹಿಳೆಯರನ್ನು ಆರೋಪಿ ಅಮ್ಜದ್ ಬಳಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.ದಾವಣಗೆರೆ ದೇವರಾಜ ಅರಸು ಬಡಾವಣೆಯಲ್ಲಿ ಮನೆ ಇದ್ದರೂ ಚನ್ನಗಿರಿಯಲ್ಲಿ ಔಷಧಿ ಅಂಗಡಿ ನಡೆಸುವ ಜತೆಗೆ ಅಲ್ಲೊಂದು ಮನೆ ಮಾಡಿಕೊಂಡಿದ್ದ. ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ವಿಡಿಯೋಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಅಮ್ಜದ್‌ನ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಆತನನನ್ನು ಬಂಧಿಸಿದ್ದಾರೆ ಎಂದು ಬಾತ್ಮೀದಾರರೊಬ್ಬರು ವರದಿ ಮಾಡಿದ್ದಾರೆ.
ಎಎಸ್‌ಐ ದೂರು:ಎಎಸ್‌ಐ ಎಚ್.ಎನ್.ಶಶಿಧರ್ ಜ.30ರಂದು ಸಂಜೆ ಕರ್ತವ್ಯದ ಮೇಲಿದ್ದಾಗ ತಮ್ಮ ಮೊಬೈಬ್‌ಗೆ ಬಾತ್ಮೀದಾರರೊಬ್ಬರು ವಿಡಿಯೋವೊಂದನ್ನು ಕಳಿಸಿದ್ದಾರೆ. ಅಪ್ರಾಪ್ತೆಯಂತೆ ಕಾಣುವ ಹೆಣ್ಣು ಮಗಳೊಬ್ಬಳನ್ನು ವ್ಯಕ್ತಿಯೊಬ್ಬ ಬಲವಂತವಾಗಿ ಅತ್ಯಾಚಾರ ಮಾಡುತ್ತಿರುವುದು ವಿಡಿಯೋದಲ್ಲಿದೆ. ಆ ದೃಶ್ಯವನ್ನು ಯಾವುದೋ ಮೊಬೈಲ್ ಅಥವಾ ವಿಡಿಯೋ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಸಾಧ್ಯತೆ ಇದೆ ಎಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮಗೆ ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಬಾತ್ಮೀದಾರರಿಗೆ ಎಎಸ್‌ಐ ಶಶಿಧರ್ ಕರೆ ಮಾಡಿ, ಖಚಿತಪಡಿಸಿಕೊಂಡರು. ನಂತರ ಈ ವಿಚಾರ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.ಈ ಸಂಬಂಧ ಕಲಂ 67, 67 (ಎ), 67 (ಬಿ) ಐಟಿ ಆಕ್ಟ್ ಮತ್ತು ಕಲಂ 77, 294, 64 ಬಿಎನ್‌ಎಸ್ ಕಾಯ್ದೆ -2023 ಹಾಗೂ ಕಲಂ 4, 6, 14, 15 ಪೋಕ್ಸೋ ಕಾಯ್ದೆ-2012 ಅಡಿ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪೊಲೀಸರ ತಂಡ ಆರೋಪಿತ ದೇವರಾಜ ಅರಸು ಬಡಾವಣೆ ವಾಸಿ ಅಮ್ಜದ್‌ನನ್ನು ಗುರುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವೀಡಿಯೋ ಶೇರ್, ಸೇವ್ ಮಾಡಿದರೆ ಕ್ರಮ:ಆರೋಪಿ ಅಮ್ಜದ್ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲದೇ, ಅಪ್ರಾಪ್ತೆಯರು, ಯುವತಿಯರು, ಹೆಣ್ಣುಮಕ್ಕಳ ಗೌರವ, ಘನತೆಗೆ ಧಕ್ಕೆ ತರುವಂತಹ ಯಾವುದೇ ವೀಡಿಯೋ, ಫೋಟೋ ಶೇರ್ ಮಾಡದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಪ್ರಾಪ್ತೆಯರು, ಯುವತಿಯರು, ಮಹಿಳೆಯರ ಗೌರವ, ಘನತೆಗೆ ಧಕ್ಕೆ ತರುವಂತಹ ವೀಡಿಯೋ ಶೇರ್ ಮಾಡುವುದು, ಸೇವ್ ಮಾಡಿಟ್ಟುಕೊಳ್ಳುವುದನ್ನು ಮಾಡಬೇಡಿ ಎಂದರು.ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2005 ಮತ್ತು ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಡಿ ಹೆಸರು, ವಯಸ್ಸು, ಧರ್ಮ, ವಿಳಾಸ ಮುಂತಾದ ಇತರೆ ಗುರುತಿಸುವ ಅಂಶಗಳನ್ನ ಒಳಗೊಂಡಂತೆ ಸಂತ್ರಸ್ತರು, ನೊಂದವರ ಗುರುತಿನ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧ ಎಂದರು.